Advertisement
ಶಾಸಕ ಎಚ್.ಪಿ.ಮಂಜುನಾಥ್ ನೇತೃತ್ವದಲ್ಲಿ, ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಸಮ್ಮುಖದಲ್ಲಿ ತಾಲೂಕಿನ ಗಾವಡಗೆರೆ ಹೋಬಳಿಯ ಮನುಗನಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ನಮ್ಮ ಗ್ರಾಮ ಬೇಚಾರಕ್ ಗ್ರಾಮವಾಗಿದ್ದು, ಯಾವುದೇ ಸೌಲಭ್ಯಗಳು ಪಡೆಯಲಾಗುತ್ತಿಲ್ಲ. ಪಂಚಾಯ್ತಿಯಲ್ಲಿ ಖಾತೆಯಾಗುತ್ತಿಲ್ಲ. ವಿದ್ಯುತ್ ಸಂಪರ್ಕ ಪಡೆಯಲು ಎನ್.ಓ.ಸಿ.ಸಿಗುತ್ತಿಲ್ಲ. ಸಾಲಸೌಲಭ್ಯ ಪಡೆಯಲಾಗುತ್ತಿಲ್ಲ. ಹೀಗೆ ಹತ್ತಾರು ಸಮಸ್ಯೆಗಳನ್ನು ಪ್ರತಿಬಿಂಬಿಸಿದಾಗ ಗಾವಡಗೆರೆ ಉಪತಹಸೀಲ್ದಾರ್ ವೆಂಕಟೇಶ್‌ರವರು ಬಹಳ ದಿನಗಳಿಂದ ಇದೊಂದು ಬೇಚಾರಕ್ ಗ್ರಾಮವೆಂದು ಹೇಳುತ್ತಿದ್ದರಿಂದ ಕಳೆದ ಮೂರುದಿನಗಳಿಂದ ಗ್ರಾಮವನ್ನು ಸರ್ವೆಕಾರ್ಯ ನಡೆಸಲಾಗಿದೆ. 1976ರಲ್ಲಿ ಜವರಯ್ಯನವರ ಅಳಿಯರವರು ಸರ್ವೆನಂ.19ರಲ್ಲಿ 2ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ಆದರೆ 2ಎಕರೆ ಗ್ರಾಮಠಾಣಾ ಭೂಮಿಯನ್ನು ಆ ಕುಟುಂಬ ಅನುಭವಿಸುತ್ತಿದ್ದಾರೆ.
Related Articles
Advertisement
ಶಿವನಕೆರೆ ಬಳಿ 20ಮನೆಗಳು ನಿರ್ಮಿಸಿಕೊಂಡಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನಿವಾಸಿಗಳು ಮಾಡಿದ ಮನವಿಗೆ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ. ವಾರದಲ್ಲಿ ವಿದ್ಯುತ್‌ಸೌಲಭ್ಯ ಕಲ್ಪಿಸಲು ಶಾಸಕರು ಚೆಸ್ಕಾಂ ಎ.ಇ.ಇ.ಸಿದ್ದಪ್ಪರಿಗೆ ಸೂಚಿಸಿದರು.
ಪಡಿತರ ಉಪಕೇಂದ್ರ ತೆರೆಯಿರಿ:
ಸತ್ಯಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ ಮನುಗನಹಳ್ಳಿಯನ್ನು ಕಂದಾಯ ಗ್ರಾಮವಾಗಿಸುವ ಜೊತೆಗೆ ಪಡಿತರ ಉಪಕೇಂದ್ರ ಹಾಗೂ ಮತಗಟ್ಟೆ ಸ್ಥಾಪಿಸಬೇಕು. ಮನೆಗಳ ಹಕ್ಕುಪತ್ರ ನೀಡಬೇಕು. ಕಟ್ಟೆಮಳಲವಾಡಿ ಅಣೆಕಟ್ಟೆ ವ್ಯಾಪ್ತಿಯ ನಾಲೆಗಳ ಹೂಳೆತ್ತಬೇಕು. ಹುಲ್ಯಾಳು ಕೆರೆಗೆ ನೀರು ತುಂಬಿಸಲು ಕ್ರಮವಹಿಸಬೇಕೆಂದರೆ, ಗಾವಡಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಹೊನ್ನಪ್ಪರಾವ್‌ಕಾಳಿಂಗೆ ತುರುಕನಕಟ್ಟೆ ಸರ್ವೆ ನಂ.1ರಲ್ಲಿ 562ಎಕರೆ ಭೂಮಿ ಇದ್ದು, ದುರಸ್ತಾಗದೆ ಸಾಲಸೌಲಭ್ಯ ಸಿಗುತ್ತಿಲ್ಲ. ಪೋಡಿ ಮುಕ್ತ ಗ್ರಾಮವನ್ನಾಗಿಸಬೇಕೆಂದು ಮನವಿ ಮಾಡಿದರು.
ರೈತಮುಖಂಡ ರಾಮೇಗೌಡ ಗೊಬ್ಬರದ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಯೂರಿಯಾ ಮತ್ತಿತರ ರಸಗೊಬ್ಬರ ಮಾರಾಟವಾಗುತ್ತಿದ್ದು, ಕ್ರಮವಹಿಸಬೇಕೆಂದು ಕೋರಿದರು. ಹಲವಾರು ಮಂದಿ ಸಮಸ್ಯೆಗಳನ್ನು ಹೇಳಿಕೊಂಡರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಇಂದಿನಿಂದಲೇ ಪಂಚಾಯ್ತಿ ಮೂಲಕ ಖಾತೆ ಮಾಡಿಕೊಡಬೇಕು. ಅಧಿಕಾರಿಗಳಲ್ಲಿ ವೈರುದ್ಯ ಬಿಟ್ಟು ಮೊದಲು ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಿಕೊಡಿ. ಆದಷ್ಟು ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿ ಪರಿಹಾರ ನೀಡಬೇಕೆಂದು ತಾಕೀತುಮಾಡಿದರು. ಇದೇ ವೇಳೆ 16ಮಂದಿ ಫಲಾನುಭವಿಗಳಿಗೆ ವಿವಿಧ ಮಾಶಾಸನದ ಆದೇಶಪತ್ರ ವಿತರಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವರ್ಣಿತ್‌ನೇಗಿ, ತಹಸೀಲ್ದಾರ್ ಡಾ.ಅಶೋಕ್, ತಾ.ಪಂ.ಇ.ಓ.ಗಿರೀಶ್, ಗ್ರಾ.ಪಂ.ಅಧ್ಯಕ್ಷ ಮೋಹನ್, ಉಪಾಧ್ಯಕ್ಷೆ ರುಕ್ಮಿಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಬೇಕಾಬಿಟ್ಟಿ ಸಭೆ ನಡೆಸಬೇಡಿ ;ವೇದಿಕೆ ನಿರ್ಮಿಸದೆ ಸಮಸ್ಯೆ ಬಗೆಹರಿಸಿ:
ಜನರ ಕಲ್ಯಾಣಕ್ಕಾಗಿರುವ ಕಾರ್ಯಕ್ರಮಗಳಲ್ಲಿ ವೇದಿಕೆ ನಿರ್ಮಿಸದೆ, ಇಲಾಖಾವಾರು ಕೌಂಟರ್ ತೆರೆಯಬೇಕು. ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದು ಸ್ಥಳದಲ್ಲೇ ಬಗೆಹರಿಸಬಹುದಾದ ಸಮಸ್ಯೆಗಳನ್ನು ಬಗೆಹರಿಸಿ, ಜನರಿಂದ ಬರುವ ಅರ್ಜಿಗಳಿಗೆ ಹಿಂಬರಹ ನೀಡುವ ಬದಲು ಆದಷ್ಟು ಬಗೆಹರಿಸುವ ಪ್ರಯತ್ನವಾಗಬೇಕು ಹಾಗಾದಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಅರ್ಥಬರಲಿದೆ ಈ ಬಗ್ಗೆ ಮುಂದಿನ ಸಭೆಯಲ್ಲಿ ಸಮರ್ಪಕವಾಗಿ ಕಾರ್ಯಕ್ರಮ ಆಯೋಜಿಸುವಂತೆ ಶಾಸಕ ಮಂಜುನಾಥ್ ಸೂಚಿಸಿದರು.