Advertisement

40% ಬಿಜೆಪಿ ಸರ್ಕಾರದವರು ನಮ್ಮ ಮೇಲೆ ಲಂಚದ ಆರೋಪ ಮಾಡ್ತಾರೆ

02:56 PM Mar 18, 2023 | Team Udayavani |

ಮಾಸ್ತಿ: ನನಗೆ ಸಿಕ್ಕಂತಹ ಅವಕಾಶದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವುದರ ಜತೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ನಂಬಿಕೆ ಉಳಿಸಿಕೊಂಡಿದ್ದೇನೆ. ಮತ್ತೂಮ್ಮೆ ಅವಕಾಶ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

Advertisement

ಮಾಸ್ತಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಆರೂವರೆ ಸಾವಿರ ಮತಗಳ ಲೀಡ್‌ ಕೊಟ್ಟು ನನ್ನ ಗೆಲುವಿಗೆ ಸಹಕಾರ ನೀಡಿದ ಮಾಸ್ತಿಗೆ ಹೆಚ್ಚಿನ ಕಾಳಜಿ ವಹಿಸಿ ವಿಶೇಷ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ ಎಂದು ವಿವರಿಸಿದರು.

ಪ್ರವಾಸಿ ತಾಣವಾಗಿ ಅಭಿವೃದ್ಧಿ: ಡಾ.ಮಾಸ್ತಿ ಹೆಸರಿನಲ್ಲಿ ವಸತಿ ಶಾಲೆಗೆ 25 ಕೋಟಿ ರೂ. ಬಿಡುಗಡೆ, ರಸ್ತೆ ಕಾಮಗಾರಿ, ಹೈಮಾಸ್ಟ್‌ ದೀಪ, ಕೊಳವೆಬಾವಿ ಸೇರಿ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮುಂದೆ ಅವಕಾಶ ನೀಡಿದರೆ ಮಾಸ್ತಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಸರ್ಕಾರ ಇದ್ದಾಗ ಏನ್‌ ಮಾಡಿದೆ ತಿಳಿಯಲಿ: ಚುನಾವಣೆ ಸಮೀಪಿಸುತ್ತಿದೆ, ಶಾಸಕರಾಗ ಬೇಕೆಂಬ ಆಸೆಯಿಂದ ಬಿಜೆಪಿ ನಾಯಕರು ಭಾಷಣದಲ್ಲಿ ನಂಜೇಗೌಡರು ತಾಲೂಕಿನ ರಸ್ತೆಗಳ ಗುಂಡಿ ಮುಚ್ಚಲಿಲ್ಲ, ಬಡವರಿಗೆ ಮನೆ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ಸರ್ಕಾರ ಇದ್ದಾಗ ನಾನು ಏನು ಮಾಡಿದ್ದೇನೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ನೀವು ಏನು ಮಾಡಿದ್ದೀರಿ ಪಟ್ಟಿ ಕೊಡಿ: ಸರ್ಕಾರ ನನಗೆ ಕೊಟ್ಟಂತಹ ಅವಕಾಶವನ್ನು ಬಳಸಿ ಕೊಂಡು, ನಾನು ಕೆಲಸ ಮಾಡಿದ್ದೇನೆ. ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿಗಳಾಗಬೇಕೆಂದು ಬಂದಿರುವ ನಿಮಗೆ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಒಬ್ಬ ಪಾರ್ಲಿಮೆಂಟ್‌ ಸದಸ್ಯ ಇದ್ದಾರೆ. ರಾಜ್ಯ ಸರ್ಕಾರ ನಿಮ್ಮದೇ ಇದೆ. ಎಲ್ಲವೂ ಇರುವಾಗ ನೀವು ಏನು ಮಾಡಿದೀರಿ ಎಂಬುದನ್ನು ಪಟ್ಟಿ ಕೊಡಿ, ನಾವು ಮಾಡಿರುವಂತಹ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡುತ್ತೇವೆ ಎಂದು ಬಿಜೆಪಿಗೆ ಸವಾಲು ಹಾಕಿದರು.

Advertisement

40 ಪರ್ಸೆಂಟ್‌ ಸರ್ಕಾರ: ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸದೇ ಬಿಜೆಪಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಅಧಿಕಾರಿಗಳು ಲಂಚ ಪಡೆಯುತ್ತಾರೆ. ತಹಶೀಲ್ದಾರ್‌ ಕಚೇರಿ, ಯಾವುದೇ ಕಚೇರಿಗೆ ಹೋದರೆ ಲಂಚ ಎಂದು ಬಿಜೆಪಿಯವರು ಭಾಷಣ ಮಾಡುತ್ತಾರೆ. ಆದರೆ, ಅವರದೇ ಸರ್ಕಾರ, ಅವರೇ ಲಂಚ ಪಡೆಯುತ್ತಾರೆ. 40 ಪರ್ಸೆಂಟ್‌ ಸರ್ಕಾರ ಎಂದು ಹೆಸರು ಪಡೆದಿರುವ ನೀವೇ ಲಂಚ ಪಡೆದು ಬೇರೊಬ್ಬರ ಮೇಲೆ ಹೇಳುತ್ತೀರಿ ಎಂದು ಛೇಡಿಸಿದರು. ಭಾರತದಲ್ಲಿ 40 ಪರ್ಸೆಂಟ್‌ ಸರ್ಕಾರ ಎಲ್ಲಿ ಎಂದು ಕೇಳಿದರೆ ಅದು ಕರ್ನಾಟಕ ಎಂದು ಹೇಳುತ್ತಾರೆ. ಇದು ಕಾಂಗ್ರೆಸ್‌ನವರು ಹೇಳುವುದಲ್ಲ. ಗುತ್ತಿಗೆದಾರರು ಹೇಳಿರುವ ಮಾತು. ಬಿಜೆಪಿಯವರು ಲಂಚ ಪಡೆ ಯುವುದಕ್ಕೆ ಅಂತಿಮ ಎನ್ನುವುದು ಇಲ್ಲ ಎಂದು ಹೇಳಿದರು.

ಈಗಾಗಲೇ ಗ್ಯಾರಂಟಿ ಕಾರ್ಡ್‌ ವಿತರಣೆ: ಕಾಂಗ್ರೆಸ್‌ ಪಕ್ಷ ಏನು ಹೇಳಿದೇ ಅದನ್ನೇ ಮಾಡುತ್ತದೆ. ಆದರೆ, ಬಿಜೆಪಿಯಂತೆ ಸುಳ್ಳು ಹೇಳುವುದಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಪ್ರತಿ ಗೃಹಿಣಿಗೆ 2000 ರೂ., ಪ್ರತಿಯೊಬ್ಬರಿಗೂ 10 ಕೇಜಿ ಅಕ್ಕಿ ವಿತರಿಸಲಾಗುತ್ತದೆ. ಇದು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಆಗಿದೆ. ಈಗಾಗಲೇ ಗ್ಯಾರಂಟಿ ಕಾರ್ಡ್‌ ವಿತರಿಸಲಾಗುತ್ತಿದೆ. ಕಾಂಗ್ರೆಸ್‌ ಪಕ್ಷ ಬೆಂಬಲ ನೀಡುವ ಮೂಲಕ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಚನ್ನರಾಯಪ್ಪ, ಜಿಪಂ ಮಾಜಿ ಸದಸ್ಯ ಆನೇಪುರ ಹನುಮಂತಪ್ಪ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌. ಎಂ.ವಿಜಯನರಸಿಂಹ, ಗ್ರಾಪಂ ಅಧ್ಯಕ್ಷ ಇಮ್ರಾನ್‌, ಸಬ್ದಾರ್‌ಬೇಗ್‌, ಕೃಷ್ಣಕುಮಾರ್‌, ಶ್ರೀನಿವಾಸ್‌, ಶೌಕತ್ತುಲ್ಲಾ ಬೇಗ್‌, ಮೋಹನ್‌ ರಾವ್‌, ಚೇತನ್‌, ನಾಗರಾಜ್‌, ಮುನಿಸ್ವಾಮಿ ಗೌಡ, ವೆಂಕಟೇಶ್‌, ಎಂ.ಸಿ.ನಾರಾಯಣ ಸ್ವಾಮಿ, ತಿಮ್ಮೇಗೌಡ, ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next