ಪಿರಿಯಾಪಟ್ಟಣ: ಹೆಚ್ಚಿನ ಮತನೀಡಿ ಗೆಲುವಿಗೆ ಕಾರಣರಾದ ಜನರನ್ನು ಎಂದು ಮರೆಯುವುದಿಲ್ಲ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ತಾಲೂಕಿನ ನಂದೀಪುರ, ಕಾನೂರು, ಕೊಣಸೂರು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂದೀಪುರ ಗ್ರಾಮದ ಪರಿಶಿಷ್ಠ ಜಾತಿ ಕಾಲೋನಿಯಲ್ಲಿ 25 ಲಕ್ಷ ಮೊತ್ತದ ಕಾಂಕ್ರಿಟ್ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಷ್ಟದಲ್ಲಿ ಇದ್ದಾಗ ಕೈ ಹಿಡಿದವರನ್ನು ಎಂದಿಗೂ ಮರೆಯಬಾರದು, ಗ್ರಾಮದ ಜನತೆ ಕಳೆದ ಚುನಾವಣೆಯಲ್ಲಿ ಉತ್ತಮ ಮತನೀಡಿದ್ದು ಇದರ ಋಣವನ್ನು ಕಾಮಗಾರಿಗಳನ್ನು ಮಾಡಿಸುವ ಮೂಲಕ ಗ್ರಾಮದ ಅಭಿವೃದ್ದಿಯ ಮೂಲಕ ತೀರಿಸಿದ್ದೇನೆ. ಮುಂದೆಯೂ ಚುನಾವಣೆ ಎದುರಾಗಲಿದ್ದು ಆಗಲೂ ಅಭಿವೃದ್ದಿಗೆ ಒತ್ತು ನೀಡಿದ ನನ್ನಪರವಾಗಿ ತಮ್ಮ ಒಲವನ್ನು ಇಟ್ಟುಕೊಂಡು ನನಗೆ ಮತನೀಡಬೇಕು ಎಂದು ಮನವಿ ಮಾಡಿದರು.
ಕೆರೆಗೆ ನೀರು ತುಂಬಿಸಿ:
ಕೊಣಸೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ನಂದೀಪುರ ಗ್ರಾಮದ ಕೆರೆದೊರೆಕರೆ ಗ್ರಾಮದ ಚೌಡಿಕಟ್ಟೆ ಕೆರೆಗಳಿಗೆ ಕೆರೆ ತುಂಬಿಸುವ ಯೋಜನೆಯಲ್ಲಿ ಈ ಕೆರೆಗಳನ್ನು ಸೇರಿಸಿ ಇವುಗಳಿಗೆ ನೀರುತುಂಬಿಸಬೇಕು ಇದರಿಂದ ಅರೆನಹಳ್ಳೀ ಗ್ರಾಮದ ಹೊಸೆರೆಕೆರೆ, ಮುಳ್ಳೂಕೆರೆ, ಹೊಸಕಟ್ಟೆ ಹೀಗೆ ಅನೇಕ ರಾವಂದೂರು ಗ್ರಾಮದವರೆಗಿನ ಎಲ್ಲಾ ಕೆರೆಗಳು ಪೈಪ್‌ಲೈನ್ ಇಲ್ಲದೆ ನೀರಾವರಿ ಸೌಲಭ್ಯವಾಗಲಿದೆ ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಟಿಎಪಿಎಸಿಎಂಎಸ್ ನಿರ್ದೇಶಕ ದೊರೆಕೆರೆ ನಾಗೇಂದ್ರ ಮನವಿಮಾಡಿದರು.
ಶಾಸಕರ ಭರವಸೆ :
ಕೆರೆ ತುಂಬಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಇದು ಯೋಜನೆಯಲ್ಲಿ ಸೇರಿಸಲು ಆಗುವುದಾದರೆ ಈಕೆರೆಗಳನ್ನು ಸೇರ್ಪಡೆ ಮಾಡಿಕೊಂಡು ಅಭಿವೃದ್ದಿ ಮಾಡಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ದೇವರಾಜೇಗೌಡ, ಗ್ರಾಮದ ಮುಖಂಡರಾದ ಕೊಣಸೂರು ಪ್ರಭು, ಎನ್.ಎಸ್.ಮಹಾದೇವ್, ರೇವಣ್ಣ, ಎನ್.ಎಸ್.ಸ್ವಾಮಿ, ವಿಶ್ವನಾಥ್, ಸೇರಿದಂತೆ ಮತ್ತಿತರು ಹಾಜರಿದ್ದರು.