ಸಾಗರ: ಇಲ್ಲಿನ ಸೊರಬ ರಸ್ತೆ ಅಗಲೀಕರಣ ಸಂಬಂಧ ಭೂಸ್ವಾಧೀನಕ್ಕೆ ಸಹಕರಿಸುವಂತೆ ಬುಧವಾರ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಅಂಗಡಿಗಳಿಗೆ ಸ್ವತಃ ತಾವೇ ತೆರಳಿ ಅಂಗಡಿ ಮಾಲೀಕರಿಗೆ ಕೈಮುಗಿದು ಮನವಿ ಮಾಡಿದರು.
ಸೊರಬ ರಸ್ತೆ ಅಗಲೀಕರಣ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ಭಾಗದಲ್ಲಿ 275 ಕ್ಕೂ ಹೆಚ್ಚು ಮನೆ ಮತ್ತು ಅಂಗಡಿ ಮುಂಗಟ್ಟುಗಳಿವೆ. ಅಗಲೀಕರಣಕ್ಕೆ ಸ್ಥಳೀಯ ನಿವಾಸಿಗಳು ಪೂರಕವಾಗಿ ಸ್ಪಂದಿಸಿದ್ದು, ನಗರಸಭೆಯಿಂದ ನೀಡಿದ ಪರಿಹಾರ ಧನವನ್ನು ಸ್ವೀಕರಿಸಿದ್ದಾರೆ. ಇನ್ನು ಕೆಲವರು ಹೆಚ್ಚಿನ ಭೂಸ್ವಾಧೀನ ಪರಿಹಾರ ಮೊತ್ತ ಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪರಿಹಾರ ಧನ ಪಡೆದ ಕೆಲವರು ಈತನಕ ಅಂಗಡಿಗಳನ್ನು ತೆರವು ಮಾಡಿ ಜಾಗ ಬಿಟ್ಟು ಕೊಟ್ಟಿಲ್ಲ. ಅಲ್ಲಿಯೇ ತಮ್ಮ ವ್ಯಾಪಾರ ವಹಿವಾಟು ಮುಂದುವರೆಸಿದ್ದಾರೆ. ಪ್ರಮುಖವಾಗಿ ಲಿಂಬು ಸರ್ಕಲ್‌ನಿಂದ ಐತಪ್ಪ ವೃತ್ತದವರೆಗೆ ಅಂಗಡಿ ತೆರವು ಮೊದಲ ಹಂತದಲ್ಲಿ ನಡೆಯಬೇಕಾಗಿದೆ. ಈ ಭಾಗದ ಅಂಗಡಿ ಮಾಲೀಕರು ಭೂಸ್ವಾಧಿನ ಪರಿಹಾರ ಸಹ ಪಡೆದಿದ್ದಾರೆ. ಆದರೆ ಅಂಗಡಿ ತೆರವು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಹಾಲಪ್ಪ ಅಂಗಡಿಗಳಿಗೆ ತೆರಳಿ ಮಾಲೀಕರಿಗೆ ಕೈಮುಗಿದು ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಹತ್ತಕ್ಕೂ ಹೆಚ್ಚು ಅಂಗಡಿಗಳಿಗೆ ತೆರಳಿ ಮಾಲೀಕರಿಗೆ ಮನವಿ ಮಾಡಿದ ಶಾಸಕರು, ಸಾರ್ವಜನಿಕ ಹಿತದೃಷ್ಟಿ ಮತ್ತು ಊರಿನ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗಲೀಕರಣ ಎಷ್ಟು ಮುಖ್ಯ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.
ಕಾನೂನು ಕ್ರಮ ಬೇಡ: ನಂತರ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಹಾಲಪ್ಪ, ನಮ್ಮೂರಿನ ಜನರು ಇಲ್ಲಿ ಅನೇಕ ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸಿ ಊರಿನ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಏಕಾಏಕಿ ಕಾನೂನಿನ ಮೂಲಕ ಅಂಗಡಿ ತೆರವು ಮಾಡುವುದು ದೊಡ್ಡ ಕೆಲಸವಲ್ಲ. ಆದರೆ ಕಾನೂನಿಗಿಂತ ಅವರ ಮನವೊಲಿಸಿ, ಅಂಗಡಿ ಜಾಗ ತೆರವು ಮಾಡಿಕೊಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಬಹುತೇಕ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸೊರಬ ರಸ್ತೆಯಲ್ಲಿ ಅನೇಕ ಅಂಗಡಿಗಳನ್ನು ತೆರವು ಮಾಡಲಾಗಿದೆ. ಕಟ್ಟಡಗಳನ್ನು ಒಡೆದಿರುವುದರಿಂದ ಚರಂಡಿ ಮುಚ್ಚಿ ಹೋಗಿದೆ. ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಚ್ಚಿರುವ ಚರಂಡಿ ತೆರವು ಮಾಡದೆ ಹೋದಲ್ಲಿ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಪರಿಹಾರ ಪಡೆದವರು ತಕ್ಷಣ ಅಂಗಡಿ ತೆರವು ಮಾಡಿ ಕೊಡಬೇಕು. ಈಗಾಗಲೇ 100ಕ್ಕೂ ಹೆಚ್ಚು ಜನರ ನಗರಸಭೆಗೆ ತಮ್ಮ ಆಸ್ತಿಯನ್ನು ಬಿಟ್ಟುಕೊಟ್ಟು ಸೂಕ್ತ ಪರಿಹಾರ ಪಡೆದಿದ್ದಾರೆ. ಇನ್ನೂ 100ಕ್ಕೂ ಹೆಚ್ಚು ಮಾಲೀಕರು ಅಂಗಡಿ ಬಿಟ್ಟು ಕೊಡಬೇಕಾಗಿದೆ. ಮುಂದಿನ ಒಂದು ವಾರದೊಳಗೆ ಎಲ್ಲರಿಗೂ ತೆರವು ಮಾಡಲು ಮನವಿ ಮಾಡಲಾಗಿದೆ ಎಂದು ಹೇಳಿದರು.