Advertisement

ಮುಖ್ಯಮಂತ್ರಿ ವಿರುದ್ಧ ಶಾಸಕ ಜಿಟಿಡಿ ಹಕ್ಕುಚ್ಯುತಿ ಮಂಡನೆ

12:25 PM Feb 11, 2018 | Team Udayavani |

ಮೈಸೂರು: ಚುನಾಯಿತ ಪ್ರತಿನಿಧಿಯಲ್ಲದ ಡಾ.ಯತೀಂದ್ರ ಹಾಗೂ ಕಾಂಗ್ರೆಸ್‌ ಮುಖಂಡರುಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸರ್ಕಾರಿ ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕಾಂಗ್ರೆಸ್‌ ಮುಖಂಡ ಕೆ.ಮರಿಗೌಡ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಡುವ ಯಾವುದೇ ಗುದ್ದಲಿ ಪೂಜೆಗಳಿಗೆ ಮಾನ್ಯತೆ ಇಲ್ಲ ಎಂದು ಪತ್ರಿಕಾ ಪ್ರಕಟಣೆಯನ್ನೇ ನೀಡಿ ಕ್ಷೇತ್ರದಿಂದ ಹೊರಗಿಟ್ಟಿದ್ದರು.

ಈಗ ಮುಖ್ಯಮಂತ್ರಿಯೇ ತಮ್ಮ ಮಗನನ್ನು ಕಳುಹಿಸಿ ಗುದ್ದಲಿಪೂಜೆ ಮಾಡಿಸುತ್ತಾರೆ. ಜನ ತಿರಸ್ಕಾರ ಮಾಡಿರುವ ಮಾಜಿ ಶಾಸಕ ಸತ್ಯನಾರಾಯಣ, ಜೈಲಿಗೆ ಹೋಗಿ ಬಂದ ಮರಿಗೌಡ ಕೂಡ ಅವರ ಜತೆಗಿರುತ್ತಾರೆ ಎಂದು ಟೀಕಿಸಿದರು.

ದುಡ್ಡು ಹಂಚಿ ಪ್ರಚಾರ: ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷರಾಗಿರುವ ಡಾ.ಯತೀಂದ್ರ, ವರುಣಾ ಕ್ಷೇತ್ರದಲ್ಲೂ ಗುದ್ದಲಿ ಪೂಜೆ, ಉದ್ಘಾಟನೆಗಳನ್ನು ಮಾಡುವಂತಿಲ್ಲ. ಆದರೆ, ಕಾಂಗ್ರೆಸ್‌ ಮುಖಂಡರುಗಳೇ ಮುಂಚಿತವಾಗಿ ಹಳ್ಳಿಗಳಿಗೆ ಹೋಗಿ ಜನರಿಗೆ ಹಣ ಕೊಟ್ಟು, ಸಿದ್ದರಾಮಯ್ಯ ಅವರ ಮಗ ಬರುತ್ತಿದ್ದಾರೆ ಎಂದು ಹೇಳಿ ಹಾರ ತಂದುಕೊಟ್ಟು ಯತೀಂದ್ರಗೆ ಹಾಕಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದು ಟೀಕೆ ಮಾಡುವ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂವಿಧಾನವನ್ನೇ ಬುಡಮೇಲು ಮಾಡುತ್ತಿದ್ದಾರೆ. ಅಂಬೇಡ್ಕರ್‌ ಈಗ ಬದುಕಿದ್ದರೆ, ಸಿದ್ದರಾಮಯ್ಯ ಅವರ ಆಡಳಿತ ಕಂಡು ಹೃದಯಾಘಾತವಾಗುತ್ತಿತ್ತು ಎಂದರು.

Advertisement

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಪಂ, ತಾಪಂ, ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರಿ ಕಾರ್ಯಕ್ರಮಗಳಿಗೆ ಕಾಂಗ್ರೆಸ್ಸಿಗರನ್ನು ಕಳುಹಿಸುತ್ತಿದ್ದಾರೆ ಎಂದು ದೂರಿದರು.

ಹೆದರಿಸ್ತಾರೆ: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರಿಗೆ ಪೊಲೀಸರನ್ನು ಬಿಟ್ಟು ಹೆದರಿಸುತ್ತಿದ್ದಾರೆ. ರಮೇಶ್‌ ಎಂಬ ನಮ್ಮ ಕಾರ್ಯಕರ್ತನ ವಿರುದ್ಧ ಯಾವುದೋ ಸಣ್ಣ ಗಲಾಟೆಯಲ್ಲಿ 15 ವರ್ಷಗಳ ಹಿಂದೆ ಹಾಕಿರುವ ರೌಡಿಪಟ್ಟಿಯಲ್ಲಿರುವವರನ್ನು ಈಗ ಠಾಣೆಗೆ ಕರೆದು ಹೆದರಿಸುತ್ತಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮು ಎಂಬಾತನ ಹೆಸರನ್ನು ರೌಡಿಪಟ್ಟಿಯಿಂದ ತೆಗೆಸಿದ್ದೇನೆ. ನೀವು ನಮ್ಮ ಜತೆಗೆ ಬಂದರೆ ನಿಮ್ಮ ಹೆಸರನ್ನೂ ತೆಗೆಸುತ್ತೇನೆ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

ತಮಗಾಗಿ ದುಡಿದವರನ್ನು ಮೂಲೆಗುಂಪು ಮಾಡಿ ಮುಗಿಸುವುದೇ ಸಿದ್ದರಾಮಯ್ಯ ಜಾಯಮಾನ. ಶ್ರೀನಿವಾಸಪ್ರಸಾದ್‌, ಎಚ್‌.ವಿಶ್ವನಾಥ್‌, ಅಂಬರೀಶ್‌ರನ್ನು ಮುಗಿಸಿದರು. ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ಆರ್ಶೀವಾದ ಇರುವುದರಿಂದ ಉಳಿದುಕೊಂಡಿದ್ದಾರೆ. ಇಲ್ಲದಿದ್ದರೆ ಅವರನ್ನೂ ಮುಗಿಸುತ್ತಿದ್ದರು ಎಂದರು. ನನ್ನ ವಿರುದ್ಧದ 10 ವರ್ಷ ಹಿಂದಿನ ಗೃಹ ಮಂಡಳಿ ಕೇಸ್‌ ತೆಗೆಸಿ, ಜಿ.ಟಿ.ದೇವೇಗೌಡ ಅಥವಾ ಅವರ ಮಗನನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸುತ್ತಾರೆ ಎಂದು ದೂರಿದರು.

ಮಗ ಸತ್ತಿದ್ದು ಹೇಗೇ?: ಸಿದ್ದರಾಮಯ್ಯ ಮಗ ರಾಕೇಶ್‌ ಸತ್ತಿದ್ದು ಹೇಗೆ ಎಂದು ಸಿದ್ದರಾಮಯ್ಯ ರಾಜ್ಯದ ಜನತೆಗೆ ಏಕೆ ಹೇಳುತ್ತಿಲ್ಲ. ರಾಕೇಶ್‌ ವಿದೇಶಕ್ಕೆ ಹೋಗಿದ್ದೇಕೆ, ಎಲ್ಲಿ ಏನು ನಡೆಯಿತು ಎಂಬುದನ್ನು ಹೇಳಲಿ ಎಂದು ಆಗ್ರಹಿಸಿದರು. ರಾಕೇಶ ಸತ್ತಮೇಲೂ ಜತೆಗೆ ಇಟ್ಟುಕೊಳ್ಳದೆ ಕಾಡಿಗೆ ತಂದು ಹಾಕಿದರು. ನಾನೂ ಹಿಂದೂ ಎನ್ನುವ ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಪ್ರದಾಯ ಗೊತ್ತಿದ್ದರೆ, ತಮ್ಮ ಹಿರೀಕರನ್ನು ಮಣ್ಣು ಮಾಡಿರುವ ಕಡೆಯೇ ಮಾಡಿಸುತ್ತಿದ್ದರು, ಮಗನನ್ನು ಕಾಡುಪಾಲು ಮಾಡುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಾಯ ಮಾಡಿದವರ ಮರೆತ ಸಿದ್ದು: ತಮ್ಮ ಮಗನ ಮೃತ ದೇಹ ತರಲು ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಎಷ್ಟು ಸಹಕಾರ ನೀಡಿದರು, ಅದನ್ನೆಲ್ಲಾ ಮರೆತು ಈಗ ಮೋದಿ ವಿರುದ್ಧವೇ ತೊಡೆತಟ್ಟುತ್ತಾರೆ ಎಂದರು. ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟಿರುವುದರಿಂದ ಸಿದ್ದರಾಮಯ್ಯ ಹೊರಗಿದ್ದಾರೆ. ಇಲ್ಲವಾದರೆ ಯಾವತ್ತೋ ಜೈಲಿಗೆ ಕಳುಹಿಸುತ್ತಿದ್ದರು ಎಂದು ಹೇಳಿದರು.

ವಸೂಲಿ ರಾಮಯ್ಯ-ಕಲೆಕ್ಷನ್‌ ಕೆಂಪಯ್ಯ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ 6 ಜನ ಸರ್ಕಲ್‌ ಇನ್ಸ್‌ಪೆಕ್ಟರ್‌, ಇಲವಾಲ ಠಾಣೆಯಲ್ಲಿ 5 ಜನ ಸಬ್‌ ಇನ್ಸ್‌ಪೆಕ್ಟರ್‌, ಜಯಪುರ ಠಾಣೆಯಲ್ಲಿ 6 ಜನ ಸಬ್‌ ಇನ್ಸ್‌ಪೆಕ್ಟರ್‌ಗಳು, 44 ಪಿಡಿಒಗಳನ್ನು ಬದಲಾವಣೆ ಮಾಡಿದ್ದಾರೆ. ವರ್ಗಾವಣೆ ಮಾಡಿಸುವುದು ಹಣ ಕೊಟ್ಟವರನ್ನು ಮತ್ತೆ ಅಲ್ಲಿಗೇ ಹಾಕುವುದನ್ನು ರೂಢಿ ಮಾಡಿಕೊಂಡಿದ್ದಾರೆ. ವಸೂಲಿ ರಾಮಯ್ಯ-ಕಲೆಕ್ಷನ್‌ ಕೆಂಪಯ್ಯ ಅವರ ಆಟ ಇದೆಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಕಿಡಿಕಾರಿದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ 2006ರ ಉಪಚುನಾವಣೆಯ ರೀತಿ ಸಮರ್ಥ ವೀಕ್ಷಕರನ್ನು ನೇಮಿಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಇಲ್ಲವಾದರೆ, ಇಲ್ಲಿ ನ್ಯಾಯಯುತ ಚುನಾವಣೆ ನಡೆಯುವುದಿಲ್ಲ.
-ಜಿ.ಟಿ.ದೇವೇಗೌಡ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next