Advertisement

ಐದಲ್ಲ, ಸರ್ವಕಾಲಕ್ಕೂ ನಿಲ್ಲುವ ಶಾಶ್ವತ ಶಕ್ತಿ ಯೋಜನೆ‌: ಶಾಸಕ ದಿನೇಶ್ ಗೂಳಿಗೌಡ

05:04 PM Jun 18, 2023 | Team Udayavani |

ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣದ ಸಾಕಾರವಾಗುತ್ತಿದ್ದು, ಈ ಯೋಜನೆ ಹಲವು ವರ್ಷಗಳ ಕಾಲ ನಂತರವು ನಿರಂತರವಾಗಿ ಜಾರಿಯಲ್ಲಿರಲಿದೆ. ಮಹಿಳೆಯರು ಇಲ್ಲಸಲ್ಲದ ಊಹಾಪೋಹಗಳಿಗೆ, ಪ್ರತಿಪಕ್ಷಗಳ ಮಾತಿಗೆ ಕಿವಿಕೊಡುವುದು ಬೇಡ. ನೂಕು ನುಗ್ಗಲು ಮಾಡಿಕೊಳ್ಳದೇ ಸಾವಧಾನವಾಗಿ “ಶಕ್ತಿ” ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷ ಮತ್ತು ಶಾಸಕ ದಿನೇಶ ಗೂಳಿಗೌಡ ವಿನಂತಿಸಿದ್ದಾರೆ.

Advertisement

ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ನೀಡಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವನ್ನು ಅಧಿಕಾರಕ್ಕೆ ಬಂದ ತಿಂಗಳೊಳಗೆ ಈಡೇರಿಸಿದೆ. ಮಹಿಳಾ ಸಬಲೀಕರಣದ ಬಗ್ಗೆ ಹಲವರು ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥವನ್ನು ನೀಡಿದೆ. ಅಕ್ಷರಶಃ ಸ್ತ್ರೀ ಶಕ್ತಿಗೆ ಹೊಸ “ಶಕ್ತಿ”, ಚೈತನ್ಯವನ್ನು ತುಂಬಿದೆ ಎಂದು ದಿನೇಶ್ ಗೂಳಿಗೌಡ ಅವರು ಅಭಿಪ್ರಾಯಪಟ್ಟರು.

ಎಲ್ಲ ವರ್ಗದವರಿಗೆ ಅನುಕೂಲ: ಶಕ್ತಿ ಯೋಜನೆಯಿಂದ ಎಲ್ಲ ವರ್ಗದ ಮಹಿಳೆಯರಿಗೆ ಅನುಕೂಲವಾಗಿದೆ. ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವವರು. ಮನೆ ಕೆಲಸಕ್ಕೆ ಹೋಗುವವರು, ಮಹಿಳಾ ಪೌರ ಕಾರ್ಮಿಕರು, ವಿದ್ಯಾರ್ಥಿನಿಯರು, ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ತೆರಳುವವರಿಗೆ, ಮಾತ್ರವಲ್ಲ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಮಹಿಳೆಯರಿಗೆ, ತವರು ಮನೆಗೆ ತೆರಳುವ ತಾಯಂದಿರಿಗೆ, ಯುವತಿಯರು, ಗೃಹಿಣಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಪ್ರಯಾಣಿಕರು ಹೆಚ್ಚಳ: ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇಕಡಾ 32ರಷ್ಟು ಹೆಚ್ಚಿದೆ. ಜೂ. 11 ರಂದು ಯೋಜನೆ ಜಾರಿಯಾಗಿದೆ. ಈ ಮೊದಲು ರಾಜ್ಯದ ನಾಲ್ಕು ನಿಗಮಗಳಲ್ಲಿ ಪ್ರತಿ ದಿನ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.‌ ಈಗ 1.10 ಕೋಟಿ ಜನ ಸರಾಸರಿ ಪ್ರಯಾಣ ಮಾಡುತ್ತಿದ್ದಾರೆ‌. ಮಹಿಳೆಯರ ಪ್ರಯಾಣವೂ ಹೆಚ್ಚಳವಾಗಿದ್ದು, ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ. ಅಂಕಿ ಅಂಶಗಳು ಯೋಜನೆಯ ಯಶಸ್ಸನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಹತ್ತು ವರ್ಷ ಮುಂದುವರಿಯಲಿದೆ: ಯೋಜನೆ ಐದಲ್ಲ ಹತ್ತು ವರ್ಷದ ಬಳಿಕವೂ ಮುಂದುವರಿಯುತ್ತದೆ. ಆತಂಕ ಬೇಡ, ಅನಾವಶ್ಯಕ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಮಹಿಳೆಯರು ಬಸ್ಗಳಲ್ಲಿ ನುಗ್ಗಿ ತೆರಳುತ್ತಿರುವುದು ಕಂಡುಬಂದಿದೆ. ಆದರೆ, ಯಾರೂ ಗೊಂದಲಗಳಿಗೆ ಒಳಗಾಗಬೇಡಿ. ಎಲ್ಲ ಮಹಿಳೆಯರಿಗೆ ಯೋಜನೆಯ ಉಪಯೋಗ ಖಂಡಿತ ದೊರೆಯುತ್ತದೆ. ಹಾಗಾಗಿ ಆತಂಕವಿಲ್ಲದೆ, ಅಪಾಯ ಮಾಡಿಕೊಳ್ಳದೆ ಪ್ರಯಾಣ ಮಾಡಿ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ವಿನಂತಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next