ವಿಜಯಪುರ : ಮಳೆ ನೀರಿನಿಂದ ಹರಿವು ಕಟ್ಟಿಕೊಂಡಿದ್ದರೂ ಪಾಲಿಕೆ ಸಿಬ್ಬಂದಿ ಸ್ವಚ್ಛತೆಗೆ ಮುಂದಾಗಲಿಲ್ಲ. ತಮ್ಮ ಸೂಚನೆಗೂ ಬೆಲೆ ಕೊಡದ ಅಧಿಕಾರಿಗಳ ವರ್ತನೆಗೆ ಬೇಸತ್ತ ಶಾಸಕರು ಸ್ವತಃ ಸಲಿಕೆ ಹಿಡಿದು ಚರಂಡಿ ಸ್ವಚ್ಛಗೊಳಿಸಿದ ಘಟನೆ ಜರುಗಿದೆ.
ನಾಗಠಾಣಾ ಶಾಸಕ ದೇವಾನಂದ ಚವ್ಹಾಣ ಅವರೇ ಸಲಿಕೆ ಹಿಡಿದು ಚರಂಡಿ ಸ್ವಚ್ಛಗೊಳಿಸಿ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದವರು.
ಕಳೆದ ಎರಡು ವಾರಗಳಿಂದ ಗಂಭೀರ ಅನಾರೋಗ್ಯದ ಕಾರಣ ಶಾಸಕ ದೇವಾನಂದ ಶನಿವಾರವೇ ಮನೆಗೆ ಮರಳಿದ್ದರು. ಮಳೆಯ ಕಾರಣ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ನಗರದ ವಾರ್ಡ್-15 ರಲ್ಲಿ ಚರಂಡಿಗಳು ಕಟ್ಟಿಕೊಂಡು ರಸ್ತೆಗೆ ಹರಿದ ಕೊಳಚೆ ಇಡೀ ಪರಿಸರದಲ್ಲಿ ದುರ್ವಾಸನೆ ಹರಡಿಸಿತ್ತು.
ಇದರಿಂದಾಗಿ ಸ್ಥಳೀಯರು ದೂರು ನೀಡಿದ್ದರಿಂದ ಶಾಸಕ ದೇವಾನಂದ ಪಾಲಿಕೆ ಅಧಿಕಾರಿಗಳಿಗೆ ಚರಂಡಿ ದುರಸ್ತಿಗೆ ಸೂಚಿಸಿದ್ದರು. ಆದರೂ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಇದರಿಂದ ಕುಪಿತರಾದ ಶಾಸಕ ದೇವಾನಂದ, ಅನಾರೋಗ್ಯದ ಮಧ್ಯೆಯೂ ತಾವೇ ಸ್ಥಳಕ್ಕೆ ಧಾವಿಸಿದರು. ಅಲ್ಲದೇ ಸ್ವಯಂ ಸಲಿಕೆ ಹಿಡಿದು ಚರಂಡಿ ಹಾಗೂ ರಸ್ತೆಯಲ್ಲಿ ಸಂಗ್ರಹವಾಗಿದ್ದ ಕೊಳವೆಯನ್ನು ಸ್ವಚ್ಛಗೊಳಿಸಿದರು.
ಈ ಹಂತದಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಶಾಸಕರ ಕ್ಷಮೆ ಯಾಚಿಸಿ, ತ್ವರಿತ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿ, ಸ್ವಚ್ಛತಾ ಕಾರ್ಯ ಕೈಬಿಡುವಂತೆ ಶಾಸಕರಿಗೆ ಮನವಿ ಮಾಡಿದರು.