ಬೆಂಗಳೂರು: ರೈತರ ಕುರಿತು ಲಘುವಾಗಿ ಮಾತಾಡುವ, ಅವರ ಕಷ್ಟಗಳನ್ನು ಗೇಲಿ ಮಾಡಿರುವ ಸಚಿವ ಬಿ.ಸಿ. ಪಾಟೀಲ್ ಅವರು ಕೂಡಲೇ ರೈತನ ಕ್ಷಮೆ ಕೇಳಬೇಕು. ಇನ್ನು ಮುಂದೆ ತಮ್ಮ ವರ್ತನೆಗೆ ಕಡಿವಾಣ ಹಾಕಿಕೊಳ್ಳಬೇಕು ಎಂದು ಶಾಸಕ ಸಿ ಎಸ್ ಪುಟ್ಟರಾಜು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಮಸ್ಯೆಗಳಿಗೆ ಸಿಕ್ಕು ಮಾನಸಿಕವಾಗಿ ಕುಗ್ಗಿಹೋದ ರೈತನೇ ಆತ್ಮಹತ್ಯೆ ಮಾಡಿಕೊಳ್ಳುವುದು. ರೈತನ ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು, ಸಂಕಷ್ಟಗಳಿಂದ ಪಾರು ಮಾಡಬೇಕಾದ್ದು ಜನಪ್ರತಿನಿಧಿಗಳು ಎನಿಸಿಕೊಂಡ, ಅದರಲ್ಲೂ ಕೃಷಿ ಇಲಾಖೆ ನೇತೃತ್ವ ವಹಿಸಿಕೊಂಡವರ ಹೊಣೆ. ಅದು ಬಿಟ್ಟು ಜೀವ ತೊರೆದ ರೈತನನ್ನು ಸಾವಿನ ನಂತರವೂ ಗೇಲಿ ಮಾಡುವುದು ವಿಕೃತಿ ಎಂದು ಟೀಕಿಸಿದರು.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟದಂತೆ ರೈತರು ಪ್ರತಿಭಟನೆ ನಡೆಸಬೇಕು: ಡಿ ಕೆ ಶಿವಕುಮಾರ್
ಕುಸಿದ ರೈತನಿಗೆ ಶಕ್ತಿ ತುಂಬುವುದು ಬಿಟ್ಟು ಅವನನ್ನು ‘ಮಾನಸಿಕ ದುರ್ಬಲ’ ಎಂದು ಅಣಕಿಸುವುದು ಕೂಡ ದುರ್ಬಲ ಮನಸ್ಸುಗಳ ವರ್ತನೆಯೇ. ಬಿ.ಸಿ. ಪಾಟೀಲರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೃಷಿ ರಂಗದ ಅಭಿವೃದ್ಧಿಯತ್ತ ಗಮನಹರಿಸಬೇಕೇ ಹೊರತು, ಸುಪ್ತವಾಗಿರುವ ತಮ್ಮ ಮಾನಸಿಕ ದೌರ್ಬಲ್ಯವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಹೋಗಬಾರದು ಎಂದಿದ್ದಾರೆ.
ಬಿ.ಸಿ. ಪಾಟೀಲ್ ಈ ಹಿಂದೆಯೂ ರೈತರ ಬಗ್ಗೆ ಇದೇ ರೀತಿಯ ಕ್ಷುಲ್ಲಕ ಹೇಳಿಕೆಗಳನ್ನು ನೀಡಿದ್ದರು. ಈಗಲೂ ಹಾಗೇ ಮಾತಾಡಿದ್ದಾರೆ. ಅವರು ಕೂಡಲೇ ರೈತನ ಕ್ಷಮೆ ಕೇಳಬೇಕು ಎಂದು ಪುಟ್ಟರಾಜು ಟ್ವೀಟ್ ಮಾಡಿದರು.