ತಿಪಟೂರು: ಬಿಜೆಪಿ ಕಾರ್ಯಕರ್ತನೋರ್ವ ತಿಪಟೂರಿನ ಶಾಸಕ ಬಿ.ಸಿ.ನಾಗೇಶ್‌ಗೆ ನಮ್ಮ ಗ್ರಾಮದಲ್ಲಿ ನಿರ್ಗತಿಕರು, ಬಡವರು ಇರುವ ಕಾರಣ ಊಟಕ್ಕಾಗಿ ಪರದಾಡುವಂತಾಗಿದ್ದು ಆಹಾರದ ಕಿಟ್ ನೀಡುವಂತೆ ದೂರವಾಣಿ ಮೂಲಕ ಮನವಿ ಮಾಡಿದಾಗ ನಾನು ನೀಡಿರುವ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.20ರಷ್ಟು ಹಣ ಕೊಟ್ಟರೆ ಆಹಾರದ ಕಿಟ್ ನೀಡುತ್ತೇನೆಂದು ಸ್ವತಃ ಶಾಸಕರೇ ಹಣದ ಬೇಡಿಕೆ ಇಟ್ಟಿದ್ದಾರೆಂಬ ಆಡಿಯೋ ಮಂಗಳವಾರ ಸಂಜೆಯಿಂದಲೇ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ತಾಲೂಕಾದ್ಯಂತ ಸಾರ್ವಜನಿಕ ವಲಯದಲ್ಲಿ
ಶಾಸಕರ ಬಗ್ಗೆ ತೀವ್ರ ಅಸಮಾಧಾನ, ಬೇಸರ ಹಾಗೂ ಚರ್ಚೆಗಳು ನಡೆಯುತ್ತಿವೆ.
ಶಾಸಕ ಒಬ್ಬ ಜನಪ್ರತಿನಿಧಿಯಾಗಿ ಮತ ಹಾಕಿ ಅಧಿಕಾರದ ಗದ್ದುಗೆಯನ್ನೇರಿಸಿದ ಜನರನ್ನೇ ಮರೆತು ಅಧಿಕಾರ ದರ್ಪ ತೋರಿಸುತ್ತಿರುವುದು ಸರಿಯಲ್ಲ. ಕೋವಿಡ್-19ನಿಂದ ಇಡೀ ದೇಶದ ಜನತೆಯೇ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಇಂಥ ಸಮಯದಲ್ಲಿ ಜನರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕಾದ ಶಾಸಕರೇ ಕಮಿಷನ್ ಕೇಳಿದರೆ ಸಮಾಜದ ವ್ಯವಸ್ಥೆ ಏನಾಗಬೇಕು. ಶಾಸಕರು ಕ್ಷೇತ್ರದ ಬಡ, ಮಧ್ಯಮ ಹಾಗೂ ನಿರ್ಗತಿಕರು ಅತ್ಯಂತ ಸಂಕಷ್ಟದ ವಿಷಮ ಪರಿಸ್ಥಿತಿ ಯಲ್ಲೂ ಹಣದ ವ್ಯಾಮೋಹದ ಕುರಿತು ಮಾತನಾಡಿರುವುದು ಎಷ್ಟು ಸರಿ ಎಂಬುದು
ತಾಲೂಕಿನ ಜನತೆಯ ಪ್ರಶ್ನೆಯಾಗಿದೆ. ಇಲ್ಲಿನ ಶಾಸಕರು ಸರ್ಕಾರದ ವೇತನ, ಇನ್ನಿತರೆ ಸೌಕರ್ಯ ಪಡೆಯುತ್ತಿದ್ದರೂ ಸಂಕಷ್ಟದ ಸಮಯದಲ್ಲಿ ಲಂಚ ತೆಗೆದು ಕೊಂಡರೆ ಮಾತ್ರ
ಬಡಜನತೆಗೆ ಆಹಾರ ಕಿಟ್ ನೀಡಲು ಸಾಧ್ಯ ಎಂದು ನಿರ್ಲಜ್ಜರಾಗಿ ಮಾತನಾಡುವುದು ಎಷ್ಟು ಸರಿ ಎಂಬುದು ಜನರ ಪ್ರಶ್ನೆಯಾಗಿದೆ.
ನನ್ನ ಮೇಲೆ ಮೊದಲಿನಿಂದಲೂ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ, ನನ್ನ ವಿಡಿಯೋ ವೈರಲ್ ಮಾಡಿರುವ ಆತ ಎರಡು ಬಾರಿ ಆಹಾರದ ಪ್ಯಾಕೇಟ್ ಹಂಚುವ ವಿಚಾರ ಪ್ರಸ್ತಾಪ ಮಾಡಿದ್ದ, ನಾನು ತೀರಾ ಬಡವರಿಗೆ ಹಂಚಬಹುದು ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಇಡೀ ಕ್ಷೇತ್ರಕ್ಕೆ ಆಹಾರದ ಕಿಟ್ ಹಂಚಲು 3 ಕೋಟಿ ಹಣ ಬೇಕು. ನಾನು ನೀನು ಮಾಡುವ ಕಾಮಗಾರಿಯಿಂದ ಲಂಚ ಪಡೆದಿಲ್ಲ ಎಂದಿದ್ದೆ ಒಬ್ಬ ಶಾಸಕನಿಗೆ ಅಷ್ಟೊಂದು ಹಣ ಎಲ್ಲಿಂದ ಬರಬೇಕು. ಅನ್ಯಮಾರ್ಗ ಇಳಿಯಬೇಕು ಅದು ಸರಿಯಲ್ಲ ಇದ್ದದನ್ನು ಇದ್ದಹಾಗೇ ಹೇಳಿದ್ದೇನೆ ಅದನ್ನು ಈ ರೀತಿ ಮಾಡಿ
ರಾಜಕೀಯ ಗಿಮಿಕ್ ಮಾಡಿದ್ದಾರೆ.
● ಬಿ.ಸಿ.ನಾಗೇಶ್, ಶಾಸಕರು, ತಿಪಟೂರು