ಹೊಸದಿಲ್ಲಿ: “ಮಿ ಟೂ’ ಅಭಿಯಾನದಡಿ ಐವರು ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ವಿದೇಶಾಂಗ ಇಲಾಖೆ ಸಹಾಯಕ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ “ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸದ್ಯ ಅವರು ನೈಜೀರಿಯಾದ ಲಾಗೋಸ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗ ವಹಿಸುತ್ತಿದ್ದಾರೆ. ಕೆಲವೊಂದು ಮಾಧ್ಯಮ ಗಳಲ್ಲಿ ವರದಿಯಾದಂತೆ ಆರೋಪಗಳ ಹಿನ್ನೆಲೆಯಲ್ಲಿ ಶುಕ್ರವಾರವೇ ಸ್ವದೇಶಕ್ಕೆ ವಾಪಸಾಗಲಿದ್ದಾರೆ ಎಂದು ಹೇಳಲಾಗಿತ್ತು. ಅನಂತರ ಸ್ಪಷ್ಟನೆ ನೀಡಿರುವ ಕೇಂದ್ರ ಸರಕಾರ ಅವರು ನಿಗದಿತ ಕಾರ್ಯ ಕ್ರಮಗಳನ್ನು ಮುಗಿಸಿ ರವಿವಾರ ವಾಪಸಾಗುವರು ಎಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಹಕ್ಕುಗಳ ಸಂರಕ್ಷಣೆಗೆ ಬದ್ಧವಾಗಿರುವ ಸರಕಾರ ಎಂಬ ಹೆಗ್ಗಳಿಕೆ ಮೋದಿ ಸರಕಾರಕ್ಕೆ ಇರುವುದರಿಂದ, ಲೈಂಗಿಕ ಕಿರುಕುಳ ಆರೋಪಿತ ಅಕ್ಬರ್ ಅವರ ರಾಜೀನಾಮೆ ಪಡೆಯಬಹುದೆಂದು ಸರಕಾರದ ಆಪ್ತ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ಹೇಳಿದೆ.
“ಮಿ ಟೂ’ಗೆ ಹೊಸಬಾಳೆ ಬೆಂಬಲ
ಆರ್‌ಎಸ್‌ಎಸ್‌ನ ಸಹಕಾರ್ಯವಾಹರಾಗಿರುವ ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಅವರಿಂದ “ಮಿ ಟೂ’ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗಿದೆ. ಫೇಸ್‌ಬುಕ್ ಸಂಸ್ಥೆಯ ಸಾರ್ವಜನಿಕ ನೀತಿಸಂಹಿತೆ (ಭಾರತೀಯ ವಿಭಾಗ) ಮುಖ್ಯಸ್ಥರಾಗಿರುವ ಆಂಖೀ ದಾಸ್ ಎಂಬ ಮಹಿಳಾ ಉದ್ಯೋಗಿಯ “ಮಿ ಟೂ ಅಭಿಯಾನ ಬೆಂಬಲಿಸಲು ನೀವು ಮಹಿಳೆ ಯರೇ ಆಗಿರಬೇಕೆಂದಿಲ್ಲ. ಸಂವೇದನಾ ಶೀಲ ಮನುಷ್ಯರಾಗಿದ್ದರೆ ಸಾಕು’ ಎಂಬ ಪೋಸ್ಟ್‌ನ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿ ಬೆಂಬಲ ಸೂಚಿಸಿದ್ದಾರೆ.