ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಬುಧವಾರ ಸಂಜೆ ರಾಜೀನಾಮೆ ನೀಡಿದ್ದಾರೆ. ಪ್ರಿಯಾರಮಣಿ ಸೇರಿದಂತೆ 20ಕ್ಕೂ ಹೆಚ್ಚು ಪತ್ರಕರ್ತೆಯರು ಮಿ ಟೂ ಅಭಿಯಾನದ ಮೂಲಕ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇವರಲ್ಲಿ ಬಹುತೇಕರು ಅಕ್ಬರ್ ಸಂಪಾದಕರಾಗಿದ್ದ ವೇಳೆಯಲ್ಲಿ ಅವರೊಂದಿಗೆ ಕೆಲಸ ಮಾಡಿದವರು, ಇಲ್ಲವೇ ಸಂದರ್ಶನಕ್ಕೆ ಹಾಜರಾದ ವೇಳೆಯಲ್ಲಿ ತಾವು ಕಿರುಕುಳ ಅನುಭವಿಸಿದ್ದಾಗಿ ಹೇಳಿದ್ದಾರೆ.
ಆದರೆ ಇದೆಲ್ಲದರ ನಡುವೆಯೂ ಅಕ್ಬರ್ ಮಾತ್ರ ಇದನ್ನು ತಮ್ಮ ವಿರುದ್ಧದ ಷಡ್ಯಂತ್ರ ಎಂದು ಹೇಳಿ ಆರೋಪಗಳನ್ನು ತಳ್ಳಿಹಾಕುತ್ತಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ ಪ್ರಿಯಾರಮಣಿ ವಿರುದ್ಧ ದಿಲ್ಲಿಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ. ಈ ಕೇಸ್‌ಗಳ ವಿರುದ್ಧ ಹೋರಾಡಲು ಅವರು 97 ವಕೀಲರನ್ನು ಬಳಸಿ ಕೊಳ್ಳಲಿದ್ದಾರೆ ಎನ್ನುವುದೇ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಅಕ್ಬರ್ ಪ್ರಕರಣ, ನರೇಂದ್ರ ಮೋದಿ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಏಕೆಂದರೆ “ಬೇಟಿ ಬಚಾವೋ ಎನ್ನುವ ಘೋಷಣೆ ಕೂಗುವ ಸರಕಾರ, ಅದೇ ಹೆಣ್ಣುಮಕ್ಕಳ ಮಾತುಗಳನ್ನು ಕೇಳಿಸಿಕೊಳ್ಳದೇ ಸುಮ್ಮನಾಗಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಟೀಕೆ ಎದುರಿಸಿತ್ತು. ದುರಂತವೆಂದರೆ, ಭಾರತೀಯ ರಾಜಕೀಯ ಚಿತ್ರಣ ಯಾವ ರೀತಿ ವಿಷಮಯವಾಗಿ ಬಿಟ್ಟಿದೆಯೆಂದರೆ ಇಂದು ಮಿ ಟೂದಂಥ ಅಭಿಯಾನ ಕೂಡ ಎಡ ವರ್ಸಸ್ ಬಲ, ಕಾಂಗ್ರೆಸ್ ವರ್ಸಸ್ ಬಿಜೆಪಿಯೆಂಬ ಚೌಕಟ್ಟೊಳಗೆ ಸಿಲುಕಲಾರಂಭಿಸಿದೆ. ಇದೇನೇ ಇದ್ದರೂ ಪ್ರಧಾನಿ ಮೋದಿ ಮಿ ಟೂ ಅಭಿಯಾನದ ವಿಚಾರದಲ್ಲಿ ಮಾತನಾಡಲೇಬೇಕಿದೆ.
ಆದಾಗ್ಯೂ ಈ ಎಲ್ಲಾ ಪ್ರಕರಣಗಳೂ ಅಕ್ಬರ್ ಪತ್ರಕರ್ತರಾಗಿದ್ದ ವೇಳೆ ನಡೆದಿವೆ ಎನ್ನಲಾಗಿದೆ. ಆಗಿನ ಕಾಲದಲ್ಲಿ ಮಹಿಳೆ ಯರಿಗೆ ತಮ್ಮ ಸಂಕಟ ಕುರಿತು ಧ್ವನಿಯೆತ್ತಲು ವೇದಿಕೆಗಳೇ ಹೆಚ್ಚಾಗಿ ಇರಲಿಲ್ಲ. ಆದರೀಗ ಸಾಮಾಜಿಕ ಮಾಧ್ಯಮಗಳು ಎಷ್ಟು ಬಲಿಷ್ಠ ವೇದಿಕೆ ಒದಗಿಸಿವೆಯೆಂದರೆ ಇದೇ ಮೊದಲ ಬಾರಿಗೆ ಭಾರತೀಯ ರಾಜಕಾರಣಿ ಯೊಬ್ಬ ಸಾಮಾಜಿಕ ಮಾಧ್ಯಮಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವಂತಾಗಿದೆ. ಅಕ್ಬರ್ ವಿರುದ್ಧದ ಆರೋಪಗಳನ್ನು ಖಡಾಖಂಡಿತವಾಗಿ “ಪಿತೂರಿ’ ಎಂದು ತಳ್ಳಿಹಾಕಲು ಸಾಧ್ಯವೇ ಇಲ್ಲ. ಏಕೆಂದರೆ, ಅವರ ವಿರುದ್ಧ ಆರೋಪ ಮಾಡಿರುವುದು ಒಬ್ಬಿಬ್ಬರಲ್ಲ ಎನ್ನುವುದನ್ನು ಗಮನಿಸಬೇಕು. ಮಿ ಟೂ ಅಭಿಯಾನವನ್ನು ಕೆಲವು ದುಷ್ಟ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆಯಾದರೂ, ಹಾಗೆಂದು, ಇಡೀ ಅಭಿಯಾನಕ್ಕೇ “ಪುರುಷ ವಿರೋಧಿ ಸಂಚು’ ಎಂದು ಟ್ಯಾಗ್ ಅಂಟಿಸಲು ಮುಂದಾಗುವುದು ಅತಿದೊಡ್ಡ ತಪ್ಪಾಗುತ್ತದೆ.
ಏಕೆಂದರೆ ಈ ವಿಷಯವನ್ನು ಗಂಡಸು ವರ್ಸಸ್ ಹೆಂಗಸು ಎನ್ನುವ ಚೌಕಟ್ಟಿನಾಚೆಗೆ ನೋಡಲೇಬೇಕಾದ ಅಗತ್ಯವಿದೆ. ಇದು ಸಹಮನುಷ್ಯರ ನೋವಿಗೆ ಕಿವಿಯಾಗುವ ಸಮಯ. ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ಕೊಟ್ಟರೂ ಕೆಲವು ಮಹಿಳೆಯರು ಅದೇ ಕಚೇರಿಯಲ್ಲಿ ಕೆಲಸ ಮಾಡಿದ್ದೇಕೆ? ಇಷ್ಟು ವರ್ಷ ಈ ಮಹಿಳೆಯರೆಲ್ಲ ಏಕೆ ಸುಮ್ಮನಿದ್ದರು ಎಂದೂ ಪ್ರಶ್ನಿಸಲಾಗುತ್ತಿದೆ.
ಇಂದು ಮಾಧ್ಯಮ ಮತ್ತು ಸಿನೆಮಾದಂಥ ಕ್ಷೇತ್ರದಲ್ಲಿ ಎಷ್ಟೊಂದು ಪುರುಷ ಪ್ರಾಧಾನ್ಯವಿದೆ ಮತ್ತು ಅಲ್ಲಿ ಮಹಿಳಾ ಸುರಕ್ಷತೆಗೆ ಪರವಾದ ಅಂಶಗಳು ಎಷ್ಟು ಕಡಿಮೆ ಇವೆ ಎನ್ನುವುದು ತಿಳಿದಿರುವಂಥದ್ದೇ. ಗಮನಿಸಬೇಕಾದ ಅಂಶವೆಂದರೆ, ಇವೆಲ್ಲ ಅನಿಶ್ಚಿತತೆಯ ಕ್ಷೇತ್ರಗಳು. ಅನಿಶ್ಚಿತತೆ ಇರುವುದರಿಂದಲೇ ಎಷ್ಟೋ ಜನ ಸಿಕ್ಕ ಕೆಲಸವನ್ನು ಅಷ್ಟು ಸುಲಭವಾಗಿ ಬಿಟ್ಟುಹೊರಡಲಾರರು. ಮುಂದೇನು ಎನ್ನುವ ಬೃಹತ್ ಪ್ರಶ್ನೆ ಅವರನ್ನು ಕಾಡುತ್ತಲೇ ಇರುತ್ತದೆ. ಮೇಲುದ್ದೆಯಲ್ಲಿರುವ ಕೆಲವರು ಮಹಿಳೆಯರ ಇಂಥ ಅಸಹಾಯಕತೆಯನ್ನೇ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ, ಕಿರುಕುಳ ಅನುಭವಿಸಿದಾಕ್ಷಣ ತಕ್ಷಣ ಏಕೆ ಮಾತನಾಡಲಿಲ್ಲ ಎನ್ನುವುದು ಅತ್ಯಂತ ಬಾಲಿಶ ಪ್ರಶ್ನೆ. ಅವರು ಧೈರ್ಯದಿಂದ ಮಾತನಾಡುವಂಥ ವಾತಾವರಣ ನಮ್ಮಲ್ಲಿ ನಿಜಕ್ಕೂ ಇದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಈಗ ಅವರ ಮಾತನ್ನು ನಾವು ಕೇಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದೆಯೂ ಇಂಥ ಪರಿಸ್ಥಿತಿ ಅನುಭವಿಸಿದವರು ಮಾತನಾಡಲು ಹಿಂಜರಿಯುವಂತಾಗುತ್ತದೆ. ಇವೆಲ್ಲದರ ನಡುವೆಯೂ ಒಂದು ಸವಾಲು ನಮ್ಮ ಮುಂದಿದೆ. ಮಿ ಟೂದಂಥ ಅಭಿಯಾನ ಯಶಸ್ವಿಯಾಗಬೇಕು ಎಂದರೆ ಆರೋಪ ಮಾಡುವವರಿಗೂ, ಆರೋಪಕ್ಕೊಳಗಾದವರಿಗೂ ಮಾತನಾಡುವ ಅವಕಾಶ ಕೊಡಬೇಕು, ಅವರ ಮಾತುಗಳಿಗೆ ಕಿವಿಯಾಗುವ ಮನಸ್ಸನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ. ಎಲ್ಲಾ ಕ್ಷೇತ್ರಗಳಲ್ಲೂ ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಬೇಕಾದ ಅಗತ್ಯವಿದೆ.