ಹುಬ್ಬಳ್ಳಿ: ಇಲ್ಲಿನ ಉಣಕಲ್ಲ ಶ್ರೀನಗರದಲ್ಲಿನ ನಿವಾಸಿಗಳಿಗೆ ನಳದಲ್ಲಿ ಒಳಚರಂಡಿ ತ್ಯಾಜ್ಯದ ಮಿಶ್ರಣಗೊಂಡ ನೀರು ಸರಬರಾಜು ಆಗುತ್ತಿದ್ದು, ಇದರಿಂದ ಈ ಪ್ರದೇಶದ ನಿವಾಸಿಗಳು ಹೈರಾಣಾಗಿದ್ದಾರೆ.
ಶ್ರೀನಗರವು ಸುಮಾರು 35 ವರ್ಷದ ಹಳೆಯ ಬಡಾವಣೆಯಾಗಿದ್ದು, ಇದರ ಪಕ್ಕದ ಬಡಾವಣೆಗಳಾದ ತಾಜ್‌ನಗರ, ಅಂಬಿಕಾನಗರ, ರವೀಂದ್ರನಗರ ಪ್ರದೇಶಗಳ ಚರಂಡಿಗಳು ಕುಡಿಯುವ ನೀರು ಸರಬರಾಜಾಗುವ ಕೊಳವೆ ಜೊತೆ ಸೇರಿಕೊಂಡಿವೆ.
ಹೀಗಾಗಿ ನಳದ ನೀರಿನಲ್ಲಿ ಚರಂಡಿ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಬಡಾವಣೆಗಳು ಹೆಚ್ಚಿದಂತೆ ಈ ಭಾಗದಲ್ಲಿ ಒಳಚರಂಡಿಯ ಕೊಳವೆ ಮಾರ್ಗವು ವಿಸ್ತೀರ್ಣಗೊಂಡಿಲ್ಲ. ಕೊಳವೆಯು ಚಿಕ್ಕದಾಗಿದ್ದರಿಂದ ಗಲೀಜು ನೀರೆಲ್ಲ ತುಂಬಿ ರಸ್ತೆ ತುಂಬೆಲ್ಲ ಹರಿಯುತ್ತದೆ.
ಈ ಭಾಗದ ಜನರು ಕಳೆದ ಒಂದು ವರ್ಷದಿಂದಲೂ ಗಲೀಜು ನೀರನ್ನೇ ಕುಡಿಯುವುದು ಹಾಗೂ ಬಳಸುವುದು ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿನ ಜನರಿಗೆ ಒಂದಿಲ್ಲೊಂದು ರೋಗಗಳು ಹುಟ್ಟಿಕೊಳ್ಳುತ್ತಿವೆ.
ಈ ಕುರಿತು ಜನಪ್ರತಿನಿಧಿಗಳಿಗೆ, ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲವೆಂದು ನಿವಾಸಿಗಳು ದೂರುತ್ತಿದ್ದಾರೆ. ಈಗ ಮೊದಲೇ 10-12 ದಿನಕ್ಕೊಮ್ಮೆ ನೀರು ಬರುತ್ತಿದೆ. ಜನರು ನೀರಿನ ಸಮಸ್ಯೆ ಅನುಭವಿ ಸುತ್ತಿರುವಾಗ ನಳದಲ್ಲಿ ಗಲೀಜು ಮಿಶ್ರಿತ ನೀರು ಬಂದರೆ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಾದರೂ ಹೇಗೆ?
ಜನಪ್ರತಿನಿಧಿಳಾದವರೂ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿರುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಹೇಗೆ ಎಂದು ಶ್ರೀನಗರ ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.