ಮುಂಬೈ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಕೂಟದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯವನ್ನು ಗೆದ್ದಿರುವ ಮುಂಬೈ, ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿದೆ. ದಶಕಗಳ ಕಾಲ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರನ್ನು ಬದಿಗೆ ಸರಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸಿದ್ದು, ಇದೀಗ ಫ್ರಾಂಚೈಸಿಗೆ ಮಗ್ಗುಲ ಮುಳ್ಳಾಗಿದೆ.
ಶುಕ್ರವಾರ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡಿದೆ. 2012ರ ಬಳಿಕ ಮೊದಲ ಬಾರಿಗೆ ಕೆಕೆಆರ್ ತಂಡವು ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ನಾಯಕ ಪಾಂಡ್ಯ, “ಹಲವು ಪ್ರಶ್ನೆಗಳಿವೆ, ಆದರೆ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಹೆಚ್ಚು ಹೇಳಲೇನು ಇಲ್ಲ. ನಿಸ್ಸಂಶಯವಾಗಿ, ನಾವು ಜೊತೆಯಾಟಗಳನ್ನು ರೂಪಿಸಲು ಸಾಧ್ಯವಾಗಲಿಲ್ಲ, ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು. ಈ ಟ್ರ್ಯಾಕ್‌ನಲ್ಲಿ ಬೌಲರ್‌ಗಳು ಅದ್ಭುತ ಕೆಲಸ ಮಾಡಿದ್ದಾರೆ,” ಎಂದು ಹೇಳಿದರು.
“ಬೌಲರ್‌ಗಳು ಅದ್ಭುತ ಕೆಲಸ ಮಾಡಿದರು, ಮೊದಲ ಇನ್ನಿಂಗ್ಸ್‌ನ ನಂತರ ವಿಕೆಟ್ ಸ್ವಲ್ಪ ಉತ್ತಮವಾಯಿತು, ಇಬ್ಬನಿ ಬಂದಿತು. ನಾವು ಉತ್ತಮವಾಗಿ ಏನು ಮಾಡಬಹುದೆಂದು ನೋಡುತ್ತೇವೆ. ಹೋರಾಟ ಮಾಡುತ್ತಲೇ ಇರಬೇಕು, ಅದನ್ನೇ ನಾನು ನನಗೆ ಹೇಳಿಕೊಳ್ಳುತ್ತಿದ್ದೇನೆ. ಕಠಿಣ ದಿನಗಳು ಬರುತ್ತವೆ ಆದರೆ ಒಳ್ಳೆಯದು ಕೂಡ ಇಲ್ಲಿ ಬರುತ್ತದೆ, ಇದು ಒಂದು ಸವಾಲು, ಆದರೆ ಸವಾಲುಗಳು ನಿಮ್ಮನ್ನು ಉತ್ತಮಗೊಳಿಸುತ್ತವೆ” ಎಂದು ಪಾಂಡ್ಯ ಹೇಳಿದರು.
ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ರನ್ ಚೇಸಿಂಗ್ ವೇಳೆ ಆರರಲ್ಲಿ ಐದನ್ನು ಸೋತಿತು. ಆರ್ ಸಿಬಿ ವಿರುದ್ಧದ ಒಂದು ಪಂದ್ಯದಲ್ಲಿ ಮಾತ್ರ ಚೇಸಿಂಗ್ ನಲ್ಲಿ ಗೆಲುವು ಕಂಡಿದೆ.