Advertisement
ಈಗ ಮಾರುಕಟ್ಟೆಯಲ್ಲಿ 5-6 ಸಾವಿರ ರೂ.ಗಳಿಂದ ಹಿಡಿದು ಲಕ್ಷ ರೂ.ಗಳವರೆಗೆ ಸೌಂಡ್ ಬಾರ್ ಗಳು ದೊರಕುತ್ತಿವೆ. ನಮ್ಮ ಬಜೆಟ್ ಗೆ ಹೊಂದುವಂಥ ಗುಣಮಟ್ಟದ ಸೌಂಡ್ ಬಾರ್ ಗಳನ್ನು ಆಯ್ಕೆ ಮಾಡುವುದಕ್ಕೆ ಸರ್ಕಸ್ ಮಾಡಬೇಕಾಗುತ್ತದೆ. 10 ಸಾವಿರ ರೂ.ಗಳೊಳಗೆ ಸೌಂಡ್ ಬಾರ್ ಹುಡುಕುತ್ತಿದ್ದರೆ ಪರಿಗಣಿಸಬಹುದಾದ ಒಂದು ಆಯ್ಕೆ ಮಿವಿ ಫೋರ್ಟ್ ಎಸ್ 200. ಇತ್ತೀಚಿಗೆ ಬಿಡುಗಡೆಯಾದ ಈ ಸೌಂಡ್ ಬಾರ್ ಗುಣಮಟ್ಟ ಹೇಗಿದೆ ಎಂಬುದರ ವಿವರಣೆ ಇಲ್ಲಿದೆ.
Related Articles
Advertisement
ಕಾರ್ಯಾಚರಣೆ: ಸೌಂಡ್ ಬಾರ್ ನ ಪವರ್ ಕೇಬಲ್ ಅನ್ನು ವಿದ್ಯುತ್ ಪ್ಲಗ್ ಗೆ ಹಾಕಿ, ನಂತರ ಎಚ್ ಡಿ ಎಂ ಐ ಕೇಬಲ್ ಅಥವಾ ಟಿವಿಯಲ್ಲಿ ಸೆಟಿಂಗ್ ಗೆ ಹೋಗಿ ಬ್ಲೂಟೂತ್ ಗೆ ಪೇರ್ ಮಾಡುವ ಮೂಲಕ ಅಥವಾ ಮೇಲೆ ಹೇಳಿರುವ ಬೇರೆ ಯಾವುದಾದರೂ ಕೇಬಲ್ ಮೂಲಕ ಟಿವಿಗೆ ಸಂಪರ್ಕಿಸಬೇಕು. ಇದರೊಡನೆ ನೀಡಲಾಗಿರುವ ರಿಮೋಟ್ ನಲ್ಲಿ ಇದನ್ನು ಆಪರೇಟ್ ಮಾಡಬೇಕು. ಇದರಲ್ಲಿ ಮೂರು ಬಗೆಯ ಪ್ರಿಸೆಟ್ ಈಕ್ವಲೈಜರ್ ಮೋಡ್ ಗಳಿವೆ. ಮೂವೀಸ್, ಮ್ಯೂಸಿಕ್ ಮತ್ತು ನ್ಯೂಸ್. ನೀವು ದೃಶ್ಯಗಳನ್ನುನೋಡುವಾಗ ರಿಮೋಟ್ ಮೂಲಕ ನಿಮಗೆ ಬೇಕಾದ ಸೌಂಡ್ ಮೋಡ್ ಅನ್ನು ಆಯ್ಕೆ ಮಾಡಿಕೊಂಡು, ನಿಮ್ಮ ಕಿವಿಗೆ ಹಿತವೆನಿಸುವ ಮೋಡ್ ನಲ್ಲಿ ಟಿವಿ ನೋಡಬಹುದು.
ಸೌಂಡ್ ಗುಣಮಟ್ಟ: ಮೊದಲೇ ತಿಳಿಸಿದ ಹಾಗೆ ಇದು 200 ವ್ಯಾಟ್ಸ್ ಸೌಂಡ್ ಔಟ್ ಪುಟ್ ಹೊಂದಿದೆ. ಮನೆಗಳ ಸಾಧಾರಣ ಹಾಲ್ ಗೆ ಈ ಔಟ್ ಪುಟ್ ಸಾಕು. ಸೌಂಡ್ ಬಾರ್ ಮತ್ತು ಜೊತೆಗೆ ನೀಡಿರುವ ಸಬ್ ವೂಫರ್ ಎರಡರ ಜೋಡಿ ಉತ್ತಮ ಗುಣಮಟ್ಟದ ಸೌಂಡ್ ಔಟ್ ಪುಟ ನೀಡುತ್ತವೆ. ನಿಮ್ಮ ಟಿವಿಯಲ್ಲಿ ಬರುವ ಸೌಂಡ್ ಗೂ, ಈ ಸೌಂಡ್ ಬಾರ್ ನಲ್ಲಿ ಬರುವ ಸೌಂಡ್ ಗುಣಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಸಿನಿಮಾವನ್ನು ಮಿನಿ ಥಿಯೇಟರ್ ನಲ್ಲಿ ನೋಡಿದ ಅನುಭವವನ್ನು ಈ ಸೌಂಡ್ ಬಾರ್ ನೀಡುತ್ತದೆ. ಆದರೆ ಮನೆಯವರು ಸೌಂಡ್ ಜಾಸ್ತಿಯಾಯಿತು ಎಂದು ದೂರಬಾರದಷ್ಟೇ!
ಹೆವಿ ಬಾಸ್: ಇದರಲ್ಲಿ ಪ್ರಿಸೆಟ್ ಸೌಂಡ್ ಮೋಡ್ ಮಾತ್ರವಲ್ಲದೇ, ನಮಗೆ ಬೇಕಾದಷ್ಟು ಬಾಸ್ ಮತ್ತು ಟ್ರೆಬಲ್ ಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಆಯ್ಕೆ ರಿಮೋಟ್ ನಲ್ಲಿದೆ. ಒಂದರಿಂದ ಐದರವರೆಗೆ ನಮಗೆ ಬೇಕಾದಷ್ಟು ಬಾಸ್ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಇದರ ಬಾಸ್ ಅನ್ನು ಒಂದು ಅಥವಾ ಎರಡು ಪಾಯಿಂಟ್ ಗೆ ನಿಲ್ಲಿಸಿದರೇ ಹೆವಿ ಬಾಸ್ ಅನುಭವವಾಗುತ್ತದೆ! ಉತ್ತಮ ಬಿಜಿಎಂ ಇರುವ ಸಿನಿಮಾಗಳನ್ನು ಇದರಲ್ಲಿ ನೋಡಲು ಮಜವಾಗಿರುತ್ತದೆ.
ಫ್ಲಿಪ್ ಕಾರ್ಟ್ ನಲ್ಲಿ ಇದರ ರಿವ್ಯೂ ಗಮನಿಸಿದಾಗ ಅಚ್ಚರಿಯಾಗುತ್ತದೆ. ಇದಕ್ಕೆ ಒಟ್ಟಾರೆ 4.5 ಸ್ಟಾರ್ ರೇಟಿಂಗ್ ಇದೆ. ಸೌಂಡ್ ಕ್ವಾಲಿಟಿ, ಬಾಸ್ ಗೆ 4.6 ರೇಟಿಂಗ್ ಇದೆ. ಕೊಂಡಿರುವ ಅನೇಕರು ಇದರ ಸೌಂಡ್ ಕ್ವಾಲಿಟಿ, ಬಿಲ್ಡ್ ಕ್ವಾಲಿಟಿಯನ್ನು ಪ್ರಶಂಸಿದ್ದಾರೆ. ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ ಎಂದಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇದು 10 ಸಾವಿರದೊಳಗಿನ ಯಾವುದೇ ಬ್ರಾಂಡಿನ ಸೌಂಡ್ ಬಾರ್ ಗಳಿಗೆ ಉತ್ತಮ ಸ್ಪರ್ಧೆ ನೀಡುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ