ಜೀವಲೋಕದ ಸೃಷ್ಟಿಯೇ ಒಂದು ಅಚ್ಚರಿ. ಒಂದು ಹುಳ ಅನೇಕ ಹಂತದ ವಿಕಾಸದ ನಂತರ ಸುಂದರ ಚಿಟ್ಟೆಯಾಗಿ ಬದಲಾಗುತ್ತದೆ. ಈ ವಿಕಾಸದ ಹಾದಿಯಲ್ಲಿ ಅದಕ್ಕಿರುವ ನೋವು, ಸಂಕಟ ನೂರಾರು. ಇದನ್ನೇ ವಿಷಯವಸ್ತುವಾಗಿಸಿ ಅದಕ್ಕೆ ಮನುಷ್ಯ ಸ್ವರೂಪ ಕೊಟ್ಟು ಹೇಳುವ ಕಥೆಯೇ “ರೂಪಾಂತರ’. ನಾಲ್ಕು ಭಿನ್ನ ಕಥೆಗಳಲ್ಲಿ ಬರುವ ನಾಲ್ಕು ಪ್ರಮುಖ ಪಾತ್ರಗಳು ಹೇಗೆ ತಮ್ಮ ಮನಸ್ಸು, ಆಲೋಚನೆ ಬದಲಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯಬೇಕಾದರೆ ನೀವು “ರೂಪಾಂತರ’ (Roopanthara) ನೋಡಬೇಕು.
ಬೇರೊಂದು ಲೋಕಕ್ಕೆ ಕೊಂಡೊಯ್ಯುವ ಚಿತ್ರದ ಆರಂಭ, ಅಲ್ಲಿಂದಲೇ ಚಿತ್ರ ವಿಭಿನ್ನವೆನಿಸುತ್ತದೆ. ಅಲೆಮಾರಿಯೊಬ್ಬ ಹೇಳುವ ಕಥೆಗೆ ಕಿವಿಗೊಡುವ ಜನರು, ಅಲ್ಲಿಂದ ಅಸಲಿ ಸಿನಿಮಾ ಶುರು. ಹಣಕ್ಕಾಗಿ ಹೊಡೆದಾಡುವ ಲೋಕಲ್ ರೌಡಿ, ಹೆಂಡತಿಯ ಆಸೆಯಂತೆ ಅವಳನ್ನು ಪಟ್ಟಣಕ್ಕೆ ಕರೆತರುವ ಹಳ್ಳಿಯ ಮುದುಕ, ಅಮಾಯಕ ಭಿಕ್ಷುಕಿಯನ್ನು ರಕ್ಷಿಸುವ ಪೇದೆ, ಸೈಬರ್ ಜಾಲಕ್ಕೆ ಬಲಿಯಾಗಿ ಕುಕೃತ್ಯವೆಸಗಲು ಹೊರಟಿದ್ದ ಯುವಕ – ಈ ನಾಲ್ಕು ಪಾತ್ರಗಳ ಸುತ್ತ ಸಾಗುತ್ತದೆ “ರೂಪಾಂತರ’.
ಕಥೆ ಸಾಗುತ್ತಿದ್ದಂತೆ ಪ್ರೇಕ್ಷಕನ ಮನಸ್ಸಿನಲ್ಲಿ, ಮುಂದೇನಾಗುತ್ತದೆ ಎಂಬ ಯೋಚನೆಯ ಕಿಡಿ ಹೊತ್ತುತ್ತದೆ. ಮಧ್ಯಂತರದ ನಂತರ ಮತ್ತಷ್ಟು ಗಾಢವಾಗುವ ಕಥೆಯಲ್ಲಿ ನಾಲ್ಕೂ ಪಾತ್ರಗಳು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತವೆ. ಅಲ್ಲಿಂದ ಅವರು ಹೊರಬರುತ್ತಾರೊ? ಇಲ್ಲವೊ? ಎಂಬುದೇ ಚಿತ್ರದ ಹೂರಣ.
“ರೂಪಾಂತರ’ದಲ್ಲಿ ಚಿತ್ರಕಥೆಯೇ ಹೀರೋ ಎನ್ನಬಹುದು. ಕಥೆಯ ನಿರೂಪಣೆ, ಕಲಾವಿದರ ಅಭಿನಯದಿಂದ ಚಿತ್ರ ಮುಗಿದ ನಂತರವೂ ಪ್ರತಿ ಪಾತ್ರ ಮನಸ್ಸಿನಲ್ಲಿ ಬೇರೂರುತ್ತವೆ. ನಿರ್ದೇಶಕ ಮಿಥಿಲೇಶ್ ಎಡವಲತ್ ಹಾಗೂ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಬರೆದಿರುವ ರಾಜ್ ಬಿ. ಶೆಟ್ಟಿ ಇವರ ಜೋಡಿಯೇ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಮಿಥುನ್ ಮುಕುಂದನ್ ಸಂಗೀತ ಚಿತ್ರದ ನಿರೂಪಣೆಗೆ ಸೂಕ್ತವೆನಿಸುತ್ತದೆ. ಮುಖ್ಯ ಭೂಮಿಕೆಯಲ್ಲಿರುವ ರಾಜ್ ಬಿ. ಶೆಟ್ಟಿ ಮತ್ತೆ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ.
ನಿತೀಶ ಡಂಬಳ