Advertisement

Ronny Movie Review: ಬಣ್ಣದ ಕನಸಿಗೆ ರಕ್ತ ಲೇಪನ

10:44 AM Sep 14, 2024 | Team Udayavani |

ಜೀವನವೇ ಹಾಗೆ, ಅಂದು ಕೊಂಡಿದ್ದು ಯಾವುದೂ ಆಗುವುದಿಲ್ಲ. ಎಲ್ಲವೂ ಸುಸೂತ್ರವಾಗಿ ಸಾಗುವಾಗ ಒಂದಿಲ್ಲೊಂದು ಅಡಚಣೆ ಎದುರಾಗುತ್ತಲೇ ಇರುತ್ತವೆ. ಕೆಲ ಆಕಸ್ಮಿಕ ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ಇದೇ ಎಳೆಯನ್ನು ಕಥೆಯನ್ನಾಗಿ ಪೋಣಿಸಿದ್ದಾರೆ ನಿರ್ದೇಶಕ ಗುರುತೇಜ್‌ ಶೆಟ್ಟಿ. ಈ ವಾರ ತೆರೆಕಂಡಿರುವ “ರಾನಿ’ ಚಿತ್ರ (Ronny Movie), ಮೇಲ್ನೋಟಕ್ಕೆ ರೌಡಿಸಂ, ಭೂಗತಲೋಕ ಎಂದೆಲ್ಲ ಬಿಂಬಿತವಾದರೂ ಇಲ್ಲಿ ಕಥಾನಾಯಕನ ಸಂವೇದನೆಯನ್ನು ಮನಮುಟ್ಟುವಂತೆ ತೋರಿಸಿದ್ದಾರೆ.

Advertisement

ರಾಘವ ಅಲಿಯಾಸ್‌ ರಾನಿ ಚಿತ್ರದ ಕಥಾನಾಯಕ. ಅವನ ಬದುಕಿನ ವ್ಯಥೆಯೇ ಈ ಸಿನಿಮಾದ ಮೂಲ ವಿಷಯ. ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಮಿಂಚಿ, ದೊಡ್ಡ ಸ್ಟಾರ್‌ ಆಗಬೇಕೆಂಬ ಕನಸು ಹೊತ್ತ ನಾಯಕನಿಗೆ ಜೊತೆಯಾಗುತ್ತಾಳೆ ನಾಯಕಿ. ತನ್ನ ಕನಸಿನಂತೆ ಸಿನಿಮಾದಲ್ಲಿ ಕ್ಯಾಮರಾ ಮುಂದೆ ನಟಿಸಬೇಕಿದ್ದ ನಾಯಕ ದುರ್ಘ‌ಟನೆಯೊಂದರಲ್ಲಿ ಸಿಲುಕುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ತೆರೆಮೇಲೆ ನೋಡಿದರೆ ಚೆಂದ.

ಬಹುತೇಕ ಚಿತ್ರಗಳಲ್ಲಿ ನಾಯಕ ನಟಿಯ ಪಾತ್ರಗಳನ್ನು ಸೀಮಿತ ಗೊಳಿಸಲಾಗುತ್ತದೆ. ಆದರೆ ರಾನಿ ಹಾಗಲ್ಲ. ಇಲ್ಲಿ ಬರುವ ಮೂರೂ ನಾಯಕಿಯರು ಕಥೆಗೆ ಹೊಸ ತಿರುವು ನೀಡುತ್ತಾರೆ. ನಾಯಕನ ಪಾತ್ರದ ತೂಕಕ್ಕೆ ಸರಿಸಮವಾಗಿ ನಾಯಕಿಯರದ್ದೂ ಇರುವುದು ವಿಶೇಷ ಎನ್ನಬಹುದು.

content-img

ಕಥೆ ಸಾಗುತ್ತಿದ್ದಂತೆ ಅಲ್ಲಲ್ಲಿ ಗೊಂದಲಗಳೂ ಸೃಷ್ಟಿಯಾದರೂ, ಕ್ಲೈಮಾಕ್ಸ್‌ನಲ್ಲಿ ಉತ್ತರ ಕಂಡುಕೊಳ್ಳಬಹುದು. ಎರಡು ಟ್ರ್ಯಾಕ್‌ನಲ್ಲಿ ಆರಂಭವಾಗುವ ಕಥೆ, ಪ್ರೇಕ್ಷಕ ನಿರೀಕ್ಷಿಸದ ಅಂತ್ಯವನ್ನು ಕಾಣುತ್ತದೆ. ಸಾಮಾನ್ಯ ಕಥೆಯೊಂದನ್ನು ತಾಂತ್ರಿಕ ಅಂಶಗಳು ಮುನ್ನಡೆಸಿಕೊಂಡು ಹೋಗುತ್ತವೆ. ನಿರ್ದೇಶಕ ಗುರುತೇಜ್‌ ಶೆಟ್ಟಿ ಇಲ್ಲಿ ಜಾಣ್ಮೆ ತೋರಿದ್ದಾರೆ.

Advertisement

ಕ್ಲಾಸ್‌ ಪಾತ್ರಗಳಿಂದ ಮನೆಮಾತಾಗಿದ್ದ ನಟ ಕಿರಣ ರಾಜ್‌, ಮಾಸ್‌ ಅವತಾರದಲ್ಲೂ ನಟಿಸಬಲ್ಲೆ ಎಂದು ರಾನಿ ಮೂಲಕ ಸಾಬೀತು ಪಡಿಸಿದ್ದಾರೆ. ಇಲ್ಲಿ ಅವರದ್ದು ಒಂದೇ ಪಾತ್ರ ಎರಡೂ ಛಾಯೆ. ರಾದ್ಯಾ ಹಾಗೂ ಸಮೀಕ್ಷಾ ತಮ್ಮ ನಟನೆ ಮೂಲಕ ಭರವಸೆ ಮೂಡಿಸಿದ್ದಾರೆ. ಅಪೂರ್ವ ಅವರ ಪೊಲೀಸ್‌ ಪಾತ್ರ ಗಮನ ಸೆಳೆಯುತ್ತದೆ. ರವಿಶಂಕರ್‌ ಅವರ ಖಳನಟನೆ ಬಗ್ಗೆ ಎರಡು ಮಾತಿಲ್ಲ.

ಸಂಭಾಷಣೆ ಹಾಗೂ ಛಾಯಾಗ್ರಹಣ ಚಿತ್ರದ ಪ್ಲಸ್‌ ಪಾಯಿಂಟ್‌. ಉಳಿದಂತೆ ಧರ್ಮಣ್ಣ ಕಡೂರ್‌, ಸೂರ್ಯ ಕುಂದಾಪುರ, ಯಶ್‌ ಶೆಟ್ಟಿ, ಉಗ್ರಂ ಮಂಜು ನಟಿಸಿದ್ದಾರೆ. ಕ್ಲಾಸ್‌ ಹಾಗೂ ಮಾಸ್‌ ಎರಡೂ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ ರಾನಿ.

ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.