ಲಂಡನ್: ಪ್ರತಿಷ್ಟಿತ ಏಕದಿನ ವಿಶ್ವಕಪ್ ಪಂದ್ಯಾವಳಿಯ ಗುರುವಾರದ ಪಂದ್ಯ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪಂದ್ಯದಲ್ಲಿನ ಸರಿ ತಪ್ಪುಗಳನ್ನು ನಿರ್ಣಯ ಮಾಡುವ ಅಂಪಾಯರ್ಸ್ ಹಲವಾರು ತಪ್ಪುಗಳನ್ನು ಮಾಡಿ ಈಗ ಟೀಕೆಗೆ ಗುರಿಯಾಗಿದ್ದಾರೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಟಿಂಗ್ ಹ್ಯಾಮ್ ಪಂದ್ಯದಲ್ಲಿ ಈ ಎಡವಟ್ಟು ನಡೆದಿದೆ. ವಿಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಅಂಪಾಯರ್ ಎರಡೆರಡು ಸಲ ಕೆಟ್ಟ ತೀರ್ಪು ನೀಡಿದರು. ಎರಡೂ ಸಲ ಗೇಲ್ ಡಿಆರ್ ಎಸ್ ಅಪೀಲ್ ಮಾಡಿದರು. ಎರಡೂ ಸಲವು ಥರ್ಡ್ ಅಂಪಾಯರ್, ಆನ್ ಫೀಲ್ಡ್ ಅಂಪಾಯರ್ ತೀರ್ಪಿಗೆ ವಿರುದ್ಧವಾಗಿಯೇ ತೀರ್ಪು ನೀಡಿದರು.
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ 5ನೇ ಓವರ್ ನ ಐದನೇ ಎಸೆತಕ್ಕೆ ಮತ್ತೆ ಲೆಗ್ ಬಿಫೋರ್ ವಿಕೆಟ್ ಗೆ ಮನವಿ ಮಾಡಲಾಯಿತು. ಮತ್ತದೇ ಕಥೆ. ಅಂಪಾಯರ್ ಯಥಾವತ್ತಾಗಿ ಔಟೆಂದು ಕೈ ಮೇಲಕ್ಕೆತ್ತಿದರು. ಗೇಲ್ ಮತ್ತೆ ಡಿಆರ್ ಎಸ್ ಮನವಿ ಮಾಡಿದರು. ಆದರೆ ಈ ಬಾರಿ ‘ಅಂಪಾಯರ್ಸ್ ಕಾಲ್’ ಎಂಬ ತೀರ್ಪು ಬಂದ ಕಾರಣ ಗೇಲ್ ಔಟಾಗಬೇಕಾಯಿತು.
ಆದರೆ ನಂತರ ಗೊತ್ತಾದ ವಿಷಯವೇನೆಂದರೆ ಗೇಲ್ ಔಟಾದ ಎಸೆತದ ಹಿಂದಿನ ಎಸೆತ ಅಂದರೆ ನಾಲ್ಕನೇ ಎಸೆತ ನೋಬಾಲ್ ಆಗಿತ್ತು. ಸ್ಟಾರ್ಕ್ ಬಾಲ್ ಹಾಕುವಾಗ ಬೌಲಿಂಗ್ ಕ್ರೀಸ್ ದಾಟಿ ಎದುರು ಕಾಲು ಇಟ್ಟಿದ್ದರು. ಆದರೆ ಇದನ್ನು ಅಂಪಾಯರ್ ಗಮನಿಸಲೇ ಇಲ್ಲ. ಈ ಬಾಲ್ ನೋ ಬಾಲ್ ಆಗಿದ್ದರೆ ಅದರ ಮುಂದಿನ ಎಸೆತ ಫ್ರೀ ಹಿಟ್ ಆಗುತ್ತಿತ್ತು. ಆಗ ಬಹುಶಃ ಗೇಲ್ ಔಟಾಗುತ್ತಿರಲಿಲ್ಲ.
ಏನೇ ಆಗಲಿ, ಇಷ್ಟು ದೊಡ್ಡ ನೋ ಬಾಲ್ ಆದು ಹೇಗೆ ಅಂಪಾಯರ್ ಗೆ ಕಾಣಿಸಲಿಲ್ಲವೋ ! ಇನ್ನಾದರೂ ವಿಶ್ವ ಕಪ್ ನಂತಹ ದೊಡ್ಡ ಕೂಟದಲ್ಲಿ ಅಂಪಾಯರಿಂಗ್ ಗುಣಮಟ್ಟದ ಬಗ್ಗೆ ಐಸಿಸಿ ಗಮನ ಹರಿಸಬೇಕು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.