ಜೊಹಾನ್ಸ್‌ಬರ್ಗ್: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಪ್ರಧಾನ ವೇಗಿ ಮಿಚೆಲ್ ಸ್ಟಾರ್ಕ್ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಹಾರಲಿದ್ದಾರೆ. ಕಾರಣ ಏನು ಗೊತ್ತೇ?
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪತ್ನಿ ಅಲಿಸ್ಸಾ ಹೀಲಿ ಅವರ ಆಟವನ್ನು ಮೈದಾನದಲ್ಲಿದ್ದು ವೀಕ್ಷಿಸುವುದು! ಇದರಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ಪೊಚೆಫ್ಸ್ಟ್ರೊಮ್‌ನಲ್ಲಿ ನಡೆಯಲಿರುವ
ಅಂತಿಮ ಏಕದಿನ ಪಂದ್ಯವನ್ನು ಮಿಚೆಲ್ ಸ್ಟಾರ್ಕ್ ತಪ್ಪಿಸಿಕೊಳ್ಳಲಿದ್ದಾರೆ.
ಅಲಿಸ್ಸಾ ಹೀಲಿ ಆಸ್ಟ್ರೇಲಿಯ ತಂಡದ ವಿಕೆಟ್‌ಕೀಪರ್ ಹಾಗೂ ಓಪನರ್ ಆಗಿದ್ದಾರೆ. ಭಾರತ ವಿರುದ್ಧದ ಆರಂಭಿಕ ಪಂದ್ಯದಲ್ಲಿ 51 ರನ್ ಬಾರಿಸಿ ಮಿಂಚಿದ್ದರು. ಅವರಿಂದ ಇಂಥದೇ ಸಾಧನೆ ಪುನರಾವರ್ತನೆಯಾದೀತೆಂಬ ನಂಬಿಕೆ ಮಿಚೆಲ್ ಸ್ಟಾರ್ಕ್ ಅವರದು.
ತವರಿನ ವಿಶ್ವಕಪ್ ಫೈನಲ್‌ನಲ್ಲಿ ಪತ್ನಿಯ ಆಟವನ್ನು ವೀಕ್ಷಿಸುವುದು ಜೀವಮಾನದಲ್ಲಿ ಒಮ್ಮೆಯಷ್ಟೇ ಬರುವ ಅವಕಾಶ. ಹೀಗಾಗಿ ನಾವು ಮಿಚೆಲ್ ಸ್ಟಾರ್ಕ್ ಅವರನ್ನು ಖುಷಿಯಲ್ಲೇ ಕಳುಹಿಸಿಕೊಟ್ಟಿದ್ದೇವೆ. ಅವರ ಪಾಲಿಗೆ ಇದೊಂದು ಅಮೋಘ ಅವಕಾಶ. ಪತ್ನಿ ಹಾಗೂ ತವರಿನ ತಂಡವನ್ನು ಮಿಚ್ ಬೆಂಬಲಿಸಲಿ…’ ಎಂಬುದಾಗಿ ಆಸ್ಟ್ರೇಲಿಯ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಾವು ಈಗಾಗಲೇ ಸರಣಿ ಕಳೆದುಕೊಂಡಿದೆ. ಆದರೆ ಸ್ಟಾರ್ಕ್ ಸ್ಥಾನ ತುಂಬಬಲ್ಲ ವೇಗಿಗಳು ತಂಡದಲ್ಲಿದ್ದಾರೆ. ಅವರು ಎರಡು ದಿನ ಮೊದಲೇ ತವರಿಗೆ ವಾಪಸಾಗಿ ನ್ಯೂಜಿಲೆಂಡ್ ಎದುರಿನ ಸರಣಿಗೆ ಹೊಸ ಸ್ಫೂರ್ತಿಯೊಂದಿಗೆ ಮರಳಲಿ…’ ಎಂದೂ ಲ್ಯಾಂಗರ್ ಹೇಳಿದರು.