ಬೆಂಗಳೂರು: ಸಕಾಲ ಮಿಷನ್‌ನಲ್ಲಿ ತುರ್ತು ಬಳಕೆಗೆ ಕಾಯ್ದಿರಿಸಿರುವ ನಿಧಿಯನ್ನು (ಇಂಪ್ರಸ್ಟ್ ಅಮೌಂಟ್) ವೈಯಕ್ತಿಕ ಬಳಕೆಯ ಐಫೋನ್, ಐಪ್ಯಾಡ್ ಖರೀದಿಗೆ ವಿನಿಯೋಗಿಸುವ ಮೂಲಕ ಹಿರಿಯ ಐಎಎಸ್ ಅಧಿಕಾರಿಗಳಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೇ ನಿಯಮ ಉಲ್ಲಂಘಿಸಿದ್ದಾರೆ.
ಹೀಗೊಂದು ಗಂಭೀರ ಆರೋಪ ಮಾಡಿರುವವರು ಸಕಾಲ ಮಿಷನ್ ಆಡಳಿತಾಧಿಕಾರಿ ಕೆ.ಮಥಾಯಿ. ಸಕಾಲ ಮಿಷನ್ ನಿರ್ದೇಶಕಿ ಕಲ್ಪನಾ, ಸಕಾಲ ಮಿಷನ್‌ನ “ಇಂಪ್ರಸ್ಟ್ ಅಮೌಂಟ್’ನಲ್ಲಿ 75,800 ರೂ. ಹಣವನ್ನು ನಿಯಮಬಾಹಿರವಾಗಿ ಫೋನ್, ಐಪಾಡ್ ಖರೀದಿಗೆ ಬಳಸಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ದೂರಿನ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಸಕಾಲ ಮಿಷನ್‌ಗೆ ಸಂಬಂಧಪಟ್ಟಂತೆ ತರಬೇತಿ ಪಡೆಯಲು ಬರುವವರು, ಅಧ್ಯಯನಕ್ಕೆ ಆಗಮಿಸುವವರು, ಮಾಹಿತಿ ಕೋರಿ ಬರುವವರಿಗೆ ಆತಿಥ್ಯ ನೀಡಲು, ತಾಂತ್ರಿಕ ತಜ್ಞರು, ವಿಷಯ ತಜ್ಞರು ಭೇಟಿ ನೀಡಿದಾಗ ಅವರಿಗೆ ಗೌರವಧನ, ಪ್ರಯಾಣ ಭತ್ಯೆ ನೀಡಲೆಂದು “ಇಂಪ್ರಸ್ಟ್ ಅಮೌಂಟ್’ ನಿಧಿ ಇರಲಿದೆ. ಈ ರೀತಿಯ ಖರ್ಚುಗಳಿಗೆ ಪೂರ್ವಾನುಮತಿ ಪಡೆಯುವುದು ಇಲ್ಲವೇ ಸೂಕ್ತ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವುದು ವಿಳಂಬವಾಗುವ ಕಾರಣ ತ್ವರಿತವಾಗಿ ಹಣ ಬಳಸಲು ಅನುಕೂಲವಾಗುವಂತೆ ನಿಧಿಗೆ ಇಂತಿಷ್ಟು ಹಣ ಕಾಯ್ದಿರಿಸಲಾಗಿರುತ್ತದೆ.
ಈ ನಿಧಿಯನ್ನು ನಿರ್ದಿಷ್ಟ ಉದ್ದೇಶಗಳಿಗಷ್ಟೇ ಬಳಸಬೇಕಿದ್ದು, ಬೇರೆ ಉದ್ದೇಶಗಳಿಗೆ ಬಳಸಲು ನಿಯಮದಲ್ಲಿ ಅವಕಾಶವಿಲ್ಲ. ಯಾವುದೇ ಖರೀದಿಗೂ ಈ ಹಣ ಬಳಸುವಂತಿಲ್ಲ ಎಂಬ ನಿಯಮವಿದೆ. ಆದರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೇ ಈ ನಿಧಿಯ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿರುವ ಬಗ್ಗೆ ಅಧೀನ ಅಧಿಕಾರಿ ಉನ್ನತ ಅಧಿಕಾರಿಗಳಿಗೆ ದೂರು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಪತ್ರದಲ್ಲಿರುವ ಆರೋಪ: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಆಡಳಿತ ಸುಧಾರಣೆ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೂ ಆದ ಸಕಾಲ ಮಿಷನ್ ನಿರ್ದೇಶಕಿ ಡಾ.ಕಲ್ಪನಾ ಅವರಿಗೆ ಲ್ಯಾಪ್‌ಟಾಪ್ ಬ್ಯಾಗ್, ಮೊಬೈಲ್ ಚಾರ್ಜರ್ (ಬ್ಲಾಕ್‌ಬೆರಿ ಪಾಸ್‌ಪೋರ್ಟ್), ಮೊಬೈಲ್ ಚಾರ್ಜರ್ (ಸ್ಯಾಮ್‌ಸಂಗ್), ಪವರ್ ಬ್ಯಾಂಕ್ (ಮೊಬೈಲ್ ಚಾರ್ಜರ್), ಐಫೋನ್ ಹಾಗೂ ಐಪಾಡ್ ಒದಗಿಸುವ ಸಂಬಂಧ ಪ್ರಸ್ತಾಪ ಸಿದಟಛಿವಾಗಿತ್ತು. ಅದರಂತೆ “ಇಂಪ್ರಸ್ಟ್ ಅಮೌಂಟ್’ ನಿಧಿಯಿಂದಲೇ 52,900 ರೂ.
ಮೊತ್ತದ ಐಪಾಡ್ ಮಿನಿ ಹಾಗೂ 22,990 ರೂ. ಮೊತ್ತದ ಐಫೋನ್ 5ಎಸ್ ಮೊಬೈಲ್ ಫೋನ್ ಅನ್ನು ಕಳೆದ ಸೆಪ್ಟೆಂಬರ್
ನಲ್ಲಿ ಖರೀದಿಸಲಾಗಿದೆ. ಆದರೆ ಸರ್ಕಾರಿ ಆದೇಶದ ಪ್ರಕಾರ ಇಂಪ್ರಸ್ಟ್ ಅಮೌಂಟ್ ಅನ್ನು ಯಾವುದೇ ಖರೀದಿ ಉದ್ದೇಶಕ್ಕೆ
ಬಳಸಲು ಅವಕಾಶವಿಲ್ಲದಿದ್ದರೂ ಬಳಸಲಾಗಿದೆ ಎಂದು ಮಥಾಯಿ ವರದಿಯಲ್ಲಿ ಉಲ್ಲೇಖೀಸಿದ್ದಾರೆ.
ಒಟ್ಟಾರೆ ಹಿರಿಯ ಐಎಎಸ್ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆಯಾಗಿದೆ ಎಂಬುದನ್ನು ಲಿಖೀತ ದೂರಿನಲ್ಲಿ ದಾಖಲಿಸಿರುವುದು ಅಧಿಕಾರಿಗಳ ಮಟ್ಟದಲ್ಲೇ ಚರ್ಚೆ ಹುಟ್ಟು ಹಾಕಿದೆ.
ಕಾರಿನ ಬಿಡಿ ಭಾಗ ಖರೀದಿಗೂ ಮನವಿ
ಅದೇ ರೀತಿ ಇತ್ತೀಚೆಗೆ ಸಕಾಲ ಮಿಷನ್ ನಿರ್ದೇಶಕರ ಅಧಿಕೃತ ಸರ್ಕಾರಿ ವಾಹನದ ಬಿಡಿ ಭಾಗಗಳ ಖರೀದಿಗೆ ಹಾಗೂ ಕಚೇರಿ
ಉಪಯೋಗಕ್ಕೆ 20 ಸಾವಿರ ರೂ. ಮುಂಗಡ ಹಣವನ್ನು ಸಕಾಲ ಮಿಷನ್‌ನಿಂದ ಬಿಡುಗಡೆ ಮಾಡುವಂತೆ ಮಿಷನ್ ನಿರ್ದೇಶಕರ ಆಪ್ತ ಸಹಾಯಕರಿಂದ ಟಿಪ್ಪಣಿ ಸಲ್ಲಿಕೆಯಾಗಿತ್ತು. ಆದರೆ “ಇಂಪ್ರಸ್ಟ್ ಅಮೌಂಟ್’ನಿಂದ ಈ ಕಾರ್ಯಗಳಿಗೆ ನಿಯಮಬಾಹಿರವಾಗಿ ಮುಂಗಡ ಹಣ ನೀಡಲು ಸಾಧ್ಯವಿಲ್ಲ ಎಂದು ಮಥಾಯಿ ತಿಳಿಸಿದ್ದರು. ಈ ಕಾರಣಕ್ಕಾಗಿ ಕಿರುಕುಳ ನೀಡಲಾರಂಭಿಸಿದ್ದಾರೆ ಎಂಬುದಾಗಿಯೂ ಅವರು ವರದಿಯಲ್ಲಿ ದಾಖಲಿಸಿದ್ದಾರೆ.