“ಕುರುಡು ದೇಶ, ಅನಾಥ ರಾಜ್ಯ…’
– ಹೀಗೊಂದು ಅಡಿಬರಹ ನೋಡಿದ ಮೇಲೆ, ಇದೊಂದು ರಾಜಕೀಯ ವಿಡಂಬನೆ ಕುರಿತ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ. “ಮುಖ್ಯಮಂತ್ರಿ ಕಳದೋದ್ನಪ್ಪೊ’ ಚಿತ್ರದ ಸುದ್ದಿ ಇದು. ಈ ಸಿನಿಮಾದ ಶೀರ್ಷಿಕೆ ಕೆಳಗಿನ ಟ್ಯಾಗ್‌ಲೈನ್ ರಾಜಕೀಯದ ಕಥೆ ಎಂಬುದನ್ನು ಸಾರಿ ಹೇಳುವಂತಿತ್ತು. ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರು ಮಾಡಿಕೊಳ್ಳುತ್ತಿದೆ.
ಶಿವಕುಮಾರ್ ಆರ್.ಭದ್ರಯ್ಯ ಈ ಚಿತ್ರದ ನಿರ್ದೇಶಕರು. ನಿರ್ಮಾಣ ಕೂಡ ಇವರದೇ. ಅಷ್ಟೇ ಅಲ್ಲ, ಹಾಡು ಬರೆದು ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ. ಇನ್ನು, ಇವರ ಪುತ್ರ ಭರತ್ ಭದ್ರಯ್ಯ ಹೀರೋ ಆಗಿದ್ದಾರೆ. ಅಲ್ಲಿಗೆ ಇದೊಂದು ಮಗನಿಗಾಗಿ ಅಪ್ಪ ಮಾಡುತ್ತಿರುವ ಸಿನಿಮಾ ಎಂದರ್ಥ.
ಸಾಮಾನ್ಯವಾಗಿ ಸರ್ಕಾರದ ಮಂತ್ರಿಗಳು ಯಾವುದೇ ಕ್ಷೇತ್ರಕ್ಕೆ ಹೋಗದೆ, ಜನರನ್ನು ಭೇಟಿ ಮಾಡದೆ ಇದ್ದಾಗ, ವಿರೋಧ ಪಕ್ಷದವರು, ಸಿಎಂ ಕಳೆದುಹೋಗಿದ್ದಾರೆ ಅಂತ ಬೊಬ್ಬೆ ಹಾಕುವುದು ಗೊತ್ತೇ ಇದೆ. ಅಂತಹ ಹಲವು ಘಟನೆಗಳನ್ನು ಇಟ್ಟುಕೊಂಡು “ಮುಖ್ಯಮಂತ್ರಿ ಕಳದೋದ್ನಪ್ಪೊ’ ಚಿತ್ರ ಮಾಡಿರುವ ನಿರ್ದೇಶಕ ಶಿವಕುಮಾರ್ ಅವರಿಗೆ ಚಿಕ್ಕವಯಸ್ಸಿನಿಂದಲೂ ಸಿನಿಮಾ ಹುಚ್ಚು ಇತ್ತಂತೆ. ಆದರೆ, ಅನುಭವ ಇರದೆ ಸಿನಿಮಾ ರಂಗಕ್ಕೆ ಎಂಟ್ರಿಯಾಗಬಾರದು ಅಂತ ಯೋಚಿಸಿ, ಒಂದಷ್ಟು ತಿಳಿದುಕೊಂಡು ಈಗ ಎಂಟ್ರಿಯಾಗಿದ್ದಾರಂತೆ.
ಚಿತ್ರದಲ್ಲಿ ಇಂದಿನ ವಾಸ್ತವತೆ, ಅಧಿಕಾರ ಸಿಕ್ಕಾಗ ಜನಪ್ರತಿನಿಧಿಗಳು ಹೇಗೆಲ್ಲಾ ಜನರನ್ನು ಯಾಮಾರಿಸುತ್ತಾರೆ, ಈಗಿನ ಯುವಜನಾಂಗದವರು ನಾಯಕ-ನಾಯಕಿ ಆಗಬೇಕು ಅಂತ ಹೇಗೆಲ್ಲಾ ಹಂಬಲಿಸುತ್ತಾರೆ ಎಂಬಿತ್ಯಾದಿ ವಿಷಯಗಳು ಇಲ್ಲಿವೆಯಂತೆ. ಒಟ್ಟಾರೆ, ಜಾತಿ ಪಿಡುಗು ತೊಲಗಬೇಕು, ಒಬ್ಬ ವ್ಯಕ್ತಿಯ ಹಿಂದೆ ಸಮಾಜ ಹೋಗಬಾರದು. ಇಂತಹ ಪರಿಕಲ್ಪನೆಗಳು ಚಿತ್ರದ ಹೈಲೈಟ್ ಅಂತೆ. ಇನ್ನು, ಭರತ್ ಭದ್ರಯ್ಯ ಅವರಿಲ್ಲಿ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರಂತೆ.
ಅಮೂಲ್ಯ ರಾಜ್ ನಾಯಕಿಯಾಗಿದ್ದಾರೆ. ಇವರಿಬ್ಬರಿಗೂ ಇದು ಹೊಸ ಅನುಭವ. ಚಿತ್ರದಲ್ಲಿ ಬಾಬು ಹಿರಣಯ್ಯ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ಎಂಟು ರಾಜ್ಯಗಳಲ್ಲಿ ಚಿತ್ರೀಕರಿಸಿರುವುದು ಚಿತ್ರದ ಇನ್ನೊಂದು ವಿಶೇಷತೆಯಂತೆ. ಚಿತ್ರಕ್ಕೆ ನವೀನ್ ಸಂಗೀತವಿದೆ. ಹರೀಶ್ ಛಾಯಾಗ್ರಹಣವಿದೆ. ನಾಗೇಂದ್ರಪ್ರಸಾದ್, ಮಂಜು ಕವಿ ಸಾಹಿತ್ಯವಿದೆ.