ಮೊಬೈಲ್ ಫೋನ್, ಕಮ್ಯುನಿಕೇಷನ್, ಟೆಕ್ನಾಲಜಿ, ಸೋಷಿಯಲ್ ಮೀಡಿಯಾಗಳು.., ಹೀಗೆ ಈಗಿನ ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೆಸರುಗಳನ್ನೇ ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿ ಇಟ್ಟುಕೊಂಡು ಬರುತ್ತಿರುವ ಚಿತ್ರಗಳ ಸಂಖ್ಯೆ ಗಾಂಧಿನಗರದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ “5ಜಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’. “ಸ್ಟಾರ್ ಒನ್ ಟು ಒನ್ ಹ್ಯಾಷ್’, “ನೀವು ಕರೆ ಮಾಡಿರುವ ಚಂದಾದಾರರು’, “ವಾಟ್ಸಾಪ್ ಲವ್’, “ರಿಂಗ್ ಟೋನ್’ ಹೀಗೆ ಹಲವು ಪದಗಳು ಕನ್ನಡ ಚಿತ್ರಗಳಿಗೆ ಟೈಟಲ್‌ಗಳಾಗಿವೆ. ಈಗ ಈ ಸಾಲಿಗೆ “ಮಿಸ್ಡ್ ಕಾಲ್’ ಎನ್ನುವ ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ.
“ಒಂದು ಮೊಬೈಲ್ ಪೋನ್‌ನಲ್ಲಿ ಏನೆಲ್ಲಾ ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸಗಳು ಆಗಬಹುದು ಎನ್ನುವುದನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಜೊತೆಗೊಂದು ಸಂದೇಶ ಕೂಡ ಇದೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ನಾಯಕನಿದ್ದರೂ ನಾಯಕಿಯ ಪಾತ್ರ ಇಲ್ಲ. ಒಬ್ಬ ನಾಯಕ ಮತ್ತೂಂದು ಮೊಬೈಲ್ ಪೋನ್ ಸುತ್ತ ಚಿತ್ರದ ಕಥೆ ನಡೆಯುತ್ತದೆ ಎನ್ನುತ್ತದೆ’ ಈ ಚಿತ್ರತಂಡ.
ಸದ್ದಿಲ್ಲದೆ ತನ್ನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ “ಮಿಸ್ಡ್ ಕಾಲ್’ ಚಿತ್ರತಂಡ ಇತ್ತೀಚೆಗೆ ತನ್ನ ಆಡಿಯೋ ಮತ್ತು ಟ್ರೇಲರ್‌ಗಳನ್ನು ನಿರ್ಮಾಪಕ ಆರ್.ಎಸ್ ಗೌಡ, ಹಂಚಿಕೆದಾರ ತಾರಕ ರಾಮ್ ಪ್ರಕಾಶ್, ನವಶಕ್ತಿ ನಾರಾಯಣ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಚಿತ್ರದ ಹಾಡುಗಳನ್ನು ಮತ್ತು ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಮಿಸ್ಡ್ ಕಾಲ್’ ಹಿಂದಿನ ಕಥೆಯನ್ನು ತೆರೆದಿಟ್ಟಿತು. “ಮಿಸ್ಡ್ ಕಾಲ್’ ಚಿತ್ರದಲ್ಲಿ ರಾಜ್ ಕಿರಣ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಿಮ್ಮಂಪಲ್ಲಿ ಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರದ ಪ್ರಮೋಷನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಇದೇ ತಿಂಗಳಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ.