Advertisement

ಕನ್ನಡಕ್ಕೊಬ್ಬಳೇ ಕನ್ನಡಕ ಸುಂದರಿ

03:45 AM Jan 27, 2017 | Harsha Rao |

ಅತ್ತ ಕಡೆ ದರ್ಶನ್‌ ಸಿನಿಮಾ, ಇತ್ತ ಕಡೆ ಪುನೀತ್‌ ಚಿತ್ರ, ಮತ್ತೂಂದು ಕಡೆ ಗಣೇಶ್‌ ಜೊತೆ “ಚಮಕ್‌’ … ಮೂವರು ಕನ್ನಡ ಚಿತ್ರರಂಗದ ಸ್ಟಾರ್‌ ನಟರು. ಇವರ ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶಕ್ಕಾಗಿ ಕಾಯುತ್ತಿರುವ ಕನಸು ಕಂಗಳ ಬೆಡಗಿಯರಿಗೇನೂ ಕಮ್ಮಿಯಿಲ್ಲ. ಆದರೆ, ಆ ಎಲ್ಲಾ ಅದೃಷ್ಟವನ್ನು ರಶ್ಮಿಕಾ ಮಂದಣ್ಣ ಎಂಬ ಕೊಡಗಿನ ಬೆಡಗಿ ಬಾಚಿಕೊಂಡು ಬಿಟ್ಟಿದ್ದಾರೆಂದರೆ ನೀವು ನಂಬಲೇಬೇಕು. ಇಂತಹ ಸ್ಟಾರ್‌ ಸಿನಿಮಾಗಳ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಅದರಲ್ಲೂ ಕನ್ನಡ ನಟಿಯರಿಗೆ ಸಿಗೋದು ಅಪರೂಪವೇ. ರಚಿತಾ ರಾಮ್‌ ಬಿಟ್ಟರೆ ಈಗ ರಶ್ಮಿಕಾ ಮಂದಣ್ಣ ಸ್ಟಾರ್‌ ಸಿನಿಮಾಗಳ ಹೀರೋಯಿನ್‌ ಎಂದು ಬಿಂಬಿತವಾಗುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ರಶ್ಮಿಕಾ ಎಂದರೆ “ಕಿರಿಕ್‌ ಪಾರ್ಟಿ’ ಸಿನಿಮಾ ತೋರಿಸಬೇಕು. ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಕಿರಿಕ್‌ ಪಾರ್ಟಿ’ ಸಿನಿಮಾ ಮೂಲಕ ಬೆಳಕಿಗೆ ಬಂದ ಹುಡುಗಿ ರಶ್ಮಿಕಾ ಈ ಪಾಟಿ ಬಿಝಿಯಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅಂತಹ ಕಲ್ಪನೆ ರಶ್ಮಿಕಾಗೂ ಇರಲಿಲ್ಲ. ಆದರೆ, ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ರಶ್ಮಿಕಾ ಸಿನಿಪ್ರಿಯರ ಮನಗೆದ್ದಿದ್ದಾರೆ. ಕಿರಿಕ್‌ ಕರ್ಣನ ಕೆಲ ದಿನಗಳ ಮುದ್ದಿನ ಸಾನ್ವಿಯಾಗಿ, ತನಗೆ ಗೊತ್ತಿಲ್ಲದಂತೆ ತೀವ್ರವಾಗಿ ಪ್ರೀತಿಸುವ ಪ್ರೇಮಿಯಾಗಿ ಹುಡುಗರ ಹಾರ್ಟಿಗೆ ಲಗ್ಗೆ ಇಟ್ಟ ಸಾನ್ವಿ ಕೈಯಲ್ಲಿ ಈಗ ಮೂರು ಸಿನಿಮಾಗಳಿವೆ. “ಮಿಲನ’ ಪ್ರಕಾಶ್‌ ನಿರ್ದೇಶನದ ದರ್ಶನ ಸಿನಿಮಾ, ಪುನೀತ್‌ ರಾಜಕುಮಾರ್‌ ಅವರ “ಪೂಜೈ’ ರೀಮೇಕ್‌ ಹಾಗೂ ಸುನಿ ನಿರ್ದೇಶನದಲ್ಲಿ ಗಣೇಶ್‌ ನಟಿಸುತ್ತಿರುವ “ಚಮಕ್‌’. ಈ ಮೂರು ಸಿನಿಮಾಗಳಿಗೂ ರಶ್ಮಿಕಾ ನಾಯಕಿ. ಸಹಜವಾಗಿಯೇ ರಶ್ಮಿಕಾ ಖುಷಿಯಾಗಿದ್ದಾರೆ. “ಜನ ಹಾಗೂ ಕನ್ನಡ ಚಿತ್ರರಂಗ ಬೇಗನೇ ನನ್ನನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ. ಹಾಗಾಗಿಯೇ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ’ ಎಂದು ಖುಷಿಯಿಂದ ಹೇಳುತ್ತಾರೆ ರಶ್ಮಿಕಾ. ಸ್ಟಾರ್‌ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳಿಗೆ ಮಹತ್ವವಿರಲ್ಲ ಎಂಬ ಮಾತು ರಶ್ಮಿಕಾ ಕಿವಿಗೂ ಬಿದ್ದಿದೆ. ಆದರೆ, ರಶ್ಮಿಕಾ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಶಕ್ತಿಮೀರಿ ಪಾತ್ರಕ್ಕೆ ನ್ಯಾಯ ಒದಗಿಸೋಕೆ. ಮಿಕ್ಕಿದ್ದನ್ನು ಜನರಿಗೆ ಬಿಡೋದೆಂದು. “ನನಗೆ “ಕಿರಿಕ್‌ ಪಾರ್ಟಿ’ ಚಿತ್ರದ ಆಫ‌ರ್‌ ಬಂದಾಗ ನನ್ನ ಪಾತ್ರವನ್ನು ಜನ ಈ ಮಟ್ಟಕ್ಕೆ ಇಷ್ಟಪಡುತ್ತಾರೆಂದು ನಾನಂದುಕೊಂಡಿರಲಿಲ್ಲ.

Advertisement

ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದೆ. ಅದನ್ನು ಜನ ಇಷ್ಟಪಟ್ಟಿದ್ದಾರೆ. ಎಷ್ಟರಮಟ್ಟಿಗೆಂದರೆ ನನ್ನ ಹೆಸರು ರಶ್ಮಿಕಾ ಎಂಬುದು ಅನೇಕರಿಗೆ ಮರೆತೇ ಹೋಗಿದೆ. ಎಲ್ಲರೂ ಸಾನ್ವಿ ಎಂದೇ ಕರೆಯುತ್ತಾರೆ. ಅದೇ ರೀತಿ ನನ್ನ ಮುಂದಿನ ಚಿತ್ರಗಳ ಪಾತ್ರಗಳನ್ನು ನಿಷ್ಠೆಯಿಂದ ಮಾಡುತ್ತೇನೆ. ಫ‌ಲದ ಬಗ್ಗೆ ಚಿಂತೆ ಮಾಡುವುದಿಲ್ಲ’ ಎನ್ನುತ್ತಾರೆ. 
ಬಹುಶಃ ಇತ್ತೀಚಿನ ದಿನಗಳಲ್ಲಿ ಯಾವ ನಟಿಗೂ ಈ ಮಟ್ಟದ ಎಕ್ಸ್‌ಪೋಶರ್‌ ಸಿಕ್ಕಿರಲಿಲ್ಲ. ಆದರೆ ರಶ್ಮಿಕಾ ಮಾತ್ರ ಆ ವಿಷಯದಲ್ಲಿ ಲಕ್ಕಿ. ಅವರು ಕನಸಿನಲ್ಲೂ ಈ ಮಟ್ಟದ ಅವಕಾಶ, ವೇದಿಕೆ ತನಗೆ ಸಿಗುತ್ತದೆಂದು ಭಾವಿಸಿರಲಿಕ್ಕಿಲ್ಲ. ಆದರೆ, ಈಗ ಅವೆಲ್ಲವೂ ಆಗಿದೆ. ಅತಿಯಾದ ನಿರೀಕ್ಷೆ, ಅವಕಾಶ, ಸ್ಟಾರ್‌ ಸಿನಿಮಾಗಳ ಸುತ್ತ ಓಡಾಡುವ ಹೆಸರು ಕೆಲವೊಮ್ಮೆ ಕೆರಿಯರ್‌ಗೆ ತೊಂದರೆಯಾಗುತ್ತದೆಂಬ ಮಾತೂ ಇದೆ. ರಶ್ಮಿಕಾಗೂ ಇಂತಹ ಭಯ ಇದೆ. “ತುಂಬಾ ನಿರೀಕ್ಷೆ ಇದೆ.

ಅತಿಯಾದ ನಿರೀಕ್ಷೆ ಭಯ ತರೋದು ಸಹಜ. ನನಗೂ ಅಂತಹ ಒಂದು ಭಯ ಇದೆ. ನನ್ನನ್ನು ನಂಬಿದ ಜನರಿಗೆ ಮೋಸವಾಗಬಾರದು, ಏನಪ್ಪಾ ಈ ಹುಡುಗಿ ಈ ತರಹದ ಪಾತ್ರ ಮಾಡಿದ್ದಾಳಾ ಎನ್ನುವಂತಾಗಬಾರದು ಎಂಬ ಕಾರಣಕ್ಕೆ ಎಚ್ಚರದ ಹೆಜ್ಜೆ ಇಡುತ್ತಿದ್ದೇನೆ’ ಎಂದು ತನ್ನ ಕೆರಿಯರ್‌ ಬಗ್ಗೆ ಹೇಳುತ್ತಾರೆ. ಇನ್ನು, ರಶ್ಮಿಕಾ ಕೆರಿಯರ್‌ ಪ್ಲ್ರಾನಿಂಗ್‌ನಲ್ಲಿ ಅವರ ತಾಯಿಯ ಪಾತ್ರ ಕೂಡಾ ಇದೆಯಂತೆ. ಡೇಟ್ಸ್‌ನಿಂದ ಹಿಡಿದು ಕಥೆ ಡಿಸ್ಕಶನ್‌, ಡಿಸಿಶನ್‌ನಲ್ಲೂ ಅವರ ತಾಯಿಯ ಪಾತ್ರವಿದೆಯಂತೆ. ಏಕೆಂದರೆ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಗಳು ಬಿಝಿಯಾಗುತ್ತಿರುವಾಗ ಆಕೆಯನ್ನು ಬೆಂಬಲಿಸಿ ಸರಿದಾರಿಯಲ್ಲಿ ನಡೆಸಬೇಕೆಂಬ ಉದ್ದೇಶದಿಂದ ಮಗಳ ಕೆರಿಯರ್‌ ಪ್ಲ್ರಾನಿಂಗ್‌ನಲ್ಲಿ ಅವರ ತಾಯಿ ನಿಂತಿದ್ದಾರೆ. ಕನ್ನಡದ ನಟಿಯಾಗಿ ಈ ಮಟ್ಟಕ್ಕೆ ಬೇಡಿಕೆಗಿಟ್ಟಿಸಿಕೊಳ್ಳುತ್ತಿರುವ ಬಗ್ಗೆ ರಶ್ಮಿಕಾಗೆ ಖುಷಿ ಇದೆ. “ಇತ್ತೀಚಿನ ದಿನಗಳಲ್ಲಿ ಕನ್ನಡದ ನಟಿಯರಿಗೆ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ. ಹಿಂದೆ ಮುಂಬೈಯಿಂದ ನಾಯಕಿಯರನ್ನು ಕರೆತರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಕನ್ನಡದ ನಟಿಯರಿಗೆ ಅವಕಾಶ ಕೊಡುತ್ತಿದ್ದಾರೆ. ಅದರಲ್ಲೂ ಹೊಸ ನಿರ್ದೇಶಕರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ನಮ್ಮ ಕನ್ನಡದ ನಟಿಯರು ಕೂಡಾ ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ತನಗೆ ಸಿಗುವ ಅವಕಾಶಗಳ ಬಗ್ಗೆ ಹೇಳುತ್ತಾರೆ ರಶ್ಮಿಕಾ. 

ಸಾಮಾನ್ಯವಾಗಿ ಹೊಸದಾಗಿ ಬಂದ ನಟಿಯರು ಬಿಝಿಯಾದಾಗ, ಅದರಲ್ಲೂ ಸ್ಟಾರ್‌ ಸಿನಿಮಾಗಳಿಗೆ ನಾಯಕಿಯಾದರೆ, “ಅವಳಿಗೆ ಅಟಿಟ್ಯೂಡ್‌ ಬಂದಿದೆ. ಸ್ಟಾರ್‌ ಎಂದು ಮೆರೆಯುತ್ತಿದ್ದಾಳೆ’ ಎಂಬ ಮಾತು ಬರುತ್ತದೆ. ಇಂತಹ ಮಾತುಗಳು  ಬಂದರೆ ರಶ್ಮಿಕಾ ತಲೆಕೆಡಿಸಿಕೊಳ್ಳುವುದಿಲ್ಲವಂತೆ. “ನನಗೆ ಮೆಸೇಜ್‌ ಮಾಡೋದೆಂದರೆ ಬೋರು. ನಾನು ಹಿಂದಿನಿಂದಲೂ ಮೆಸೇಜ್‌ನಿಂದ ದೂರ. ಅದೇ ನೇರ ಮಾತನಾಡಲು ಸಿಕ್ಕರೆ ಖುಷಿ. ಕೆಲವೊಮ್ಮೆ ಬಿಝಿ ಇದ್ದಾಗ ನಾನು ಮೆಸೇಜ್‌ಗೆ ರಿಪ್ಲೆ„ ಮಾಡೋದಿಲ್ಲ. ಅದನ್ನು ಅಟಿಟ್ಯೂಡ್‌ ಎಂದರೆ ನಾನೇನು ಮಾಡೋಕ್ಕಾಗಲ್ಲ’ ಎಂದು ನೇರವಾಗಿ ಹೇಳುತ್ತಾರೆ.

– ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next