ಹೊಸದಿಲ್ಲಿ: ಶನಿವಾರ 10.2 ಡಿ.ಸೆ., ರವಿವಾರ 4.7 ಡಿ.ಸೆ….! ಹೌದು, ಕೆಲವೇ ಕೆಲವು ದಿನಗಳ ವಿರಾಮದ ಬಳಿಕ ಹೊಸದಿಲ್ಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳು ಮತ್ತೆ ಶೀತ ಮಾರುತದ ಆಘಾತಕ್ಕೆ ಒಳಗಾಗಿವೆ. ಒಂದೇ ದಿನದಲ್ಲಿ ದೆಹಲಿಯ ಕನಿಷ್ಠ ತಾಪಮಾನದಲ್ಲಿ 5.5 ಡಿ.ಸೆ.ನಷ್ಟು ಅಂತರ ಕಂಡುಬಂದಿದೆ. ಶನಿವಾರ ಹೊಸದಿಲ್ಲಿಯ ತಾಪಮಾನ 10.2 ಡಿ.ಸೆ. ಇದ್ದಿದ್ದು, ರವಿವಾರದ ವೇಳೆಗೆ 4.7 ಡಿ.ಸೆ. ಆಗಿದೆ.
ರಾಷ್ಟ್ರ ರಾಜಧಾನಿಯ ಮಂದಿಗೆ ಮತ್ತೂಂದು ಆಘಾತಕಾರಿ ಸುದ್ದಿಯೆಂದರೆ, ಸೋಮವಾರದಿಂದ 3 ದಿನಗಳ ಕಾಲ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸದ್ಯದಲ್ಲೇ ಕನಿಷ್ಠ ತಾಪಮಾನ 0 ಡಿ.ಸೆ.ಗೆ ತಲುಪುವ ಆತಂಕವಿದ್ದು, ಮತ್ತೊಂದು ಮೂಲಗಳ ಪ್ರಕಾರ ಇದು ಮೈನಸ್ 4 ಡಿ.ಸೆ.ಗೂ ಇಳಿಯಬಹುದು ಎಂದು ಹೇಳಲಾಗಿದೆ.
ದಟ್ಟ ಮಂಜಿನಿಂದಾಗಿ ಎದುರಿಗಿರುವ ಯಾವ ವಸ್ತುವೂ ಕಾಣಿಸುತ್ತಿಲ್ಲ. ಹೀಗಾಗಿ ಹಲವಾರು ವಿಮಾನಗಳು, ರೈಲುಗಳ ಸಂಚಾರದಲ್ಲಿ ವಿಳಂಬವಾಗಿವೆ. ಹೊಸದಿಲ್ಲಿ ಮಾತ್ರವಲ್ಲದೇ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರಪ್ರದೇಶ, ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಇದೇ ಸ್ಥಿತಿಯಿದ್ದು, ಮುಂದಿನ 5 ದಿನಗಳ ಕಾಲ ಮುಂದುವರಿಯಲಿದೆ.
Related Articles
ಹೀಗಾಗಿ ಲೂಸ್ ಫಿಟ್ಟಿಂಗ್ ಇರುವ ಹಲವು ಪದರಗಳ ಉಡುಪು, ಬೆಚ್ಚಗಿನ ಉಣ್ಣೆಯ ಬಟ್ಟೆ ಮತ್ತು ತಲೆ, ಕುತ್ತಿಗೆ, ಕೈ, ಪಾದಗಳನ್ನು ಮುಚ್ಚುವಂಥ ವಸ್ತ್ರ ಧರಿಸುವಂತೆ ಹವಾಮಾನ ಇಲಾಖೆ ನಾಗರಿಕರಿಗೆ ಸೂಚಿಸಿದೆ. ಜತೆಗೆ ಅನಗತ್ಯವಾಗಿ ಮನೆಗಳಿಂದ ಹೊರಬರದಂತೆಯೂ ಎಚ್ಚರಿಸಿದೆ.
ಕಾರ್ಮಿಕರ ಸ್ಥಳಾಂತರ: ಒಂದೇ ವಾರದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 3 ಬಾರಿ ಹಿಮಪಾತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸೋನಮಾರ್ಗ್‌ನಲ್ಲಿರುವ ನಿರ್ಮಾಣ ಕಂಪೆನಿಯ ಕಾರ್ಮಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಒಂದು ಹಿಮಪಾತದಲ್ಲಿ ಝೋಜಿಲಾ ಸುರಂಗ ಕಾಮಗಾರಿಯಲ್ಲಿ ತೊಡಗಿದ್ದ ಹೈದರಾಬಾದ್ ಮೂಲದ ಕಂಪೆನಿಯ ಇಬ್ಬರು ಕಾರ್ಮಿಕರು ಅಸುನೀಗಿದ್ದರು.
ಗರ್ಭಿಣಿಯನ್ನು ರಕ್ಷಿಸಿದ ಯೋಧರು
ಜಮ್ಮು ಮತ್ತು ಕಾಶ್ಮೀರದ ರಂಬಾನ್‌ನಲ್ಲಿ ಮಂಜು ತುಂಬಿದ ಪ್ರದೇಶವೊಂದರಿಂದ ತುಂಬು ಗರ್ಭಿಣಿಯೊಬ್ಬರನ್ನು ರಕ್ಷಿಸುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. 4ರಿಂದ 5 ಅಡಿ ಎತ್ತರದಲ್ಲಿ ಆವರಿಸಿದ್ದ ದಟ್ಟ ಮಂಜಿನಲ್ಲೇ ಬರೋಬ್ಬರಿ 14 ಕಿ.ಮೀ. ಸಂಚರಿಸಿದ ಯೋಧರು, ಗರ್ಭಿಣಿ ಕುಲ್ಸುಮಾ ಅಖ್ತರ್(25) ಎಂಬವರನ್ನು ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿಮಮಳೆಯಿಂದಾಗಿ ಎಲ್ಲ ರಸ್ತೆಗಳೂ ಬ್ಲಾಕ್ ಆಗಿದ್ದು, ಮಂಜುಗಡ್ಡೆಯಲ್ಲಿ ಕಾಲಿಡುತ್ತಿದ್ದಂತೆ ಕಾಲು ಜಾರುವಂಥ ಸ್ಥಿತಿಯಿತ್ತು. ಹೀಗಾಗಿ ಸ್ಥಳೀಯರು ಸೇನೆಗೆ ತುರ್ತು ಸಂದೇಶ ರವಾನಿಸಿದ್ದರು. ಭಾರತೀಯ ಸೇನೆಯ ವೈದ್ಯಕೀಯ ತಂಡವು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗರ್ಭಿಣಿಯ ಜೀವವನ್ನು ರಕ್ಷಿಸಿದೆ. ಅವರ ಕಾರ್ಯಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಶಿಖರಗಳಿಗೆ ಹಿಮ ಹೊದಿಕೆ
ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರ, ಹಿಮಾ ಚಲ ಪ್ರದೇಶ, ಉತ್ತರಾಖಂಡದ ಬಹುತೇಕ ಎಲ್ಲ ಶಿಖರಗಳೂ ದಟ್ಟ ಹಿಮದಿಂದ ಆವೃತ ವಾಗಿವೆ. ಕೇದಾರನಾಥ-ಬದ್ರಿನಾಥ ದೇಗುಲ ಗಳು ಹಿಮದ ಹೊದಿಕೆ ಹೊದ್ದು ಮಲಗಿದಂತೆ ಭಾಸವಾಗುತ್ತಿದೆ. ಲಹೌಲ್, ನರ್ಕಂಡಾ, ಧರ್ಮಶಾಲಾ ಮತ್ತು ಮನಾಲಿಯಲ್ಲಿ ಹಿಮದ ಮಳೆ ಸುರಿಯುತ್ತಿದೆ. ಹಿಮಾಚಲ ಪ್ರದೇಶದ ಕೈಲ್ಯಾಂಗ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 7 ಡಿ.ಸೆ.ಗೆ ತಲುಪಿದೆ.
ಕನಿಷ್ಠ ತಾಪಮಾನ ಎಲ್ಲೆಲ್ಲಿ?
ಹೊಸದಿಲ್ಲಿ: – 4.7 ಡಿ.ಸೆ.
ಹಿಮಾಚಲದ ಕೈಲ್ಯಾಂಗ್: -7 ಡಿ.ಸೆ.
ಶ್ರೀನಗರ: - 0.6 ಡಿ.ಸೆ.