ನವದೆಹಲಿ: ಹಿಂದೂಗಳಿಗೆ ಯಾವ ರಾಜ್ಯದಲ್ಲಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲಾಗಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಬೇಕು. ಹೀಗೆಂದು ಸುಪ್ರೀಂಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಹಿಂದೂ ಧಾರ್ಮಿಕ ಮುಂದಾಳು ದೇವಕಿನಂದನ್ ಠಾಕೂರ್ ಎಂಬುವರು ದೇಶದಲ್ಲಿ ಕೇವಲ ಆರು ಸಮುದಾಯ ಗಳಿಗೆ ಮಾತ್ರ ಅಲ್ಪಸಂಖ್ಯಾತ ಸಮುದಾಯದ ಮಾನ್ಯತೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂಕೋರ್ಟ್ ಈ ರೀತಿ ಪ್ರಶ್ನೆ ಮಾಡಿದೆ.
ಜತೆಗೆ 1992ರಲ್ಲಿ ಜಾರಿಯಾಗಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ 1992ರ ಸೆಕ್ಷನ್ 2(ಸಿ)ಯನ್ನು ತಮ್ಮ ಅರ್ಜಿಯಲ್ಲಿ ಪ್ರಶ್ನೆ ಮಾಡಿದ್ದಾರೆ ಠಾಕೂರ್. ಜತೆಗೆ ಜಿಲ್ಲಾವಾರು ಅಲ್ಪಸಂಖ್ಯಾತರ ಗುರುತು ನಡೆಸಬೇಕು ಮತ್ತು ರಾಜ್ಯವಾರು ಮಾನ್ಯತೆ ನೀಡಬೇಕು ಎಂದು ಅರಿಕೆ ಮಾಡಿಕೊಂಡಿದ್ದಾರೆ.
ಹಲವು ಕೋರ್ಟ್‌ಗಳಲ್ಲಿ ನೀಡಲಾಗಿರುವ ತೀರ್ಪುಗಳಲ್ಲಿ ಕೂಡ ಅಲ್ಪಸಂಖ್ಯಾತ ಸಮುದಾಯದವರನ್ನು ರಾಜ್ಯಗಳ ಮಟ್ಟದಲ್ಲಿ ಗುರುತಿಸುವಂತೆ ಆಗಬೇಕು ಎಂದು ಹೇಳಿದ್ದವು ಎಂಬ ಅಂಶವನ್ನು ಅರಿಕೆ ಮಾಡಿಕೊಂಡಿದ್ದಾರೆ.
ಅದಕ್ಕೆ ಉತ್ತರಿಸಿದ ನ್ಯಾ.ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ “ನಿಗದಿತ ರಾಜ್ಯಗಳಲ್ಲಿ ಹಿಂದೂ ಗಳಿಗೆ ಅಲ್ಪಸಂಖ್ಯಾತರು ಎಂಬ ಮಾನ್ಯತೆ ನೀಡಲು ನಿರಾಕರಿಸಿದ ಉದಾಹರಣೆ ಇದೆಯೇ? ಅಂಥ ಪ್ರಕರಣಗಳು ಇದ್ದರೆ ದಾಖಲೆಗಳನ್ನು ನೀಡಿ. ಪರಿಶೀಲಿಸೋಣ. ಈ ವಿಚಾರದಲ್ಲಿ ರಾಜ್ಯವಾರು ಪರಿಶೀಲಿಸಲು ಸಾಧ್ಯವಿಲ್ಲ’ ಎಂದು ಹೇಳಿತು.