ಮಹಾನಗರ: ಭಾರತ ಸಂವಿಧಾನದ ಪರಿಚ್ಛೇದದ ಅಡಿಯಲ್ಲಿ ಪ್ರಧಾನಿ ಅಧ್ಯಕ್ಷತೆಯಲ್ಲಿ ವಿವಿಧ ಮುಖ್ಯಮಂತ್ರಿಗಳ ಸಭೆ ಆಯಾ ರಾಜ್ಯಗಳಿಗೆ ತ್ರಿಭಾಷಾ ಸೂತ್ರವನ್ನು ಅಳವಡಿಸಿ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಕರ್ನಾಟಕದಲ್ಲಿ ಕೊಂಕಣಿ, ತುಳು ಇತ್ಯಾದಿ ಅಲ್ಪಸಂಖ್ಯಾಕ ಭಾಷೆಗಳು ಉಳಿದು ಬೆಳೆದವು. ಆದುದರಿಂದ ಇಂದು ಕೆಲವರ ನೇತೃತ್ವದ ಸಮಿತಿಯು ಈ ಸವಲತ್ತನ್ನು ಮುರಿದು ದ್ವಿಭಾಷಾ ಸೂತ್ರವನ್ನು ಅಳವಡಿಸಬೇಕೆಂದು ಶಿಫಾರಸು ಮಾಡುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಕೊಂಕಣಿ ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಡಾ| ಕಸ್ತೂರಿ ಮೋಹನ ಪೈ ಹೇಳಿದರು.
ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಷತ್ತಿನೊಂದಿಗೆ ಜರಗಿದ ಜಂಟಿ ಪ್ರಶಿಕ್ಷಣ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಸವಲತ್ತು, ವಿಶ್ವ ಕೊಂಕಣಿ ಕೇಂದ್ರದ ಆರ್ಥಿಕ ಸಹಾಯ ಹಾಗೂ ತಮ್ಮ ಸಂಸ್ಥೆಯ ಉಸ್ತುವಾರಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕರಾವಳಿ ಕರ್ನಾಟಕ ಶಾಲೆಗಳಲ್ಲಿ ಕೊಂಕಣಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ 30ರಿಂದ 600ಕ್ಕೇರಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಕೊಂಕಣಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು, ಮಂಗಳೂರಿನಿಂದ ಕಾರವಾರದ ತನಕದ ಕೊಂಕಣಿ ಕಲಿಸುವ 16 ಶಿಕ್ಷಣ ಸಂಸ್ಥೆಗಳ ವಿವಿಧ ಪ್ರತಿನಿಧಿಗಳು ಹಾಗೂ ಶಿಕ್ಷಕರು ಈ ಸಂದರ್ಭ ಉಪಸ್ಥಿತರಿದ್ದರು.