ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಸಮೀಪ ಶುಕ್ರವಾರ (ಜನವರಿ 29, 2021) ಸಂಜೆ ಸ್ಫೋಟವೊಂದು ಸಂಭವಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರಾಯಭಾರ ಕಚೇರಿಯಿಂದ 40ರಿಂದ 50 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಐಇಡಿ ಸ್ಫೋಟಗೊಂಡಿರುವುದಾಗಿ ವರದಿ ಹೇಳಿದೆ. ಘಟನಾ ಸ್ಥಳಕ್ಕೆ ದೆಹಲಿ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇಸ್ರೇಲ್ ರಾಯಭಾರ ಕಚೇರಿ ಸಮೀಪ ಲಘು ತೀವ್ರತೆಯ ಐಇಡಿ ಸ್ಫೋಟಗೊಂಡಿದ್ದು, ಮೂರು ವಾಹನಗಳು ಜಖಂಗೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಎನ್ ಐಎ ತಂಡ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ರಿಟ್ರೀಟ್ ಸಮಾರಂಭದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದು, ಈ ಸಂದರ್ಭದಲ್ಲಿಯೇ ಈ ಸ್ಫೋಟ ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಸ್ಫೋಟಕವನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿ ಸುತ್ತಿ ಜಿಂದಾಲ್ ಹೌಸ್ ನ ಹೊರ ವಲಯದಲ್ಲಿ ಎಸೆದು ಹೋಗಿದ್ದರು. ಕೆಲವೇ ಮೀಟರ್ ಗಳ ಅಂತರದಲ್ಲಿ ಇಸ್ರೇಲ್ ರಾಯಭಾರ ಕಚೇರಿ ಇದ್ದಿರುವುದಾಗಿ ವರದಿ ವಿವರಿಸಿದೆ. ಇಡೀ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.