Advertisement

ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿಗೆ ಸಚಿವರ ಸೂಚನೆ

05:05 AM Mar 01, 2019 | Team Udayavani |

ಕಲಬುರಗಿ: ಆಯಾ ಇಲಾಖೆಗೆ ಸಂಬಂಧಿಸಿದಂತೆ ಬಂದಿರುವ ಸಮಸ್ಯೆಗಳ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಸಮಾಜ ಕಲ್ಯಾಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ನೇರವಾಗಿ ಸಲ್ಲಿಸಿದ ಅಹವಾಲು ಸ್ವೀಕರಿಸಿದ ಸಚಿವರು, ತಮ್ಮ ಕೈಯಲ್ಲಿ ಮಾಡಬಹುದಾದ ಸಮಸ್ಯೆಗಳಿಗೆ ಮೂರು ದಿನದೊಳಗೆ ಪರಿಹಾರ ಕಲ್ಪಿಸಬೇಕು. ಇನ್ನೂ ಕೆಲವು ಸಮಸ್ಯೆಗಳಿಗೆ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಮೇಲಾಧಿಕಾರಿಗಳ ಇಲ್ಲವೇ ತಮ್ಮ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕೆಂದು ತಾಕೀತು ಮಾಡಿದರು. 

ಪಾಲಿಕೆ ಅಧಿಕಾರಿಗಳು ಇನ್ಮುಂದೆ ಮಾಡೋಣ- ನೋಡೋಣ ಎನ್ನದೇ ತಕ್ಷಣ ಸ್ಪಂದಿಸಲು ಮುಂದಾಬೇಕು. ನಿರ್ಲಕ್ಷ್ಯತನ ತೋರಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಸಚಿವರು, ಆಯಾ ಇಲಾಖಾಧಿಕಾರಿಗಳು ತಾವೇ ಹೆಚ್ಚಿನ ಮುತುವರ್ಜಿ ವಹಿಸಿದರೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿರಲಿಲ್ಲ ಎಂದು ಅಧಿಕಾರಿಗಳಿಗೆ ಚಾಟಿ ಬೀಡಿಸಿದರು.

ಕುಡಿಯುವ ನೀರಿನ ಸಮಸ್ಯೆ, ಕಂದಾಯ ಇಲಾಖೆ, ಮಹಾನಗರ ಪಾಲಿಕೆ, ಸರ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಬಂಧಿಸಿದಂತೆ ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಸ್ಥಳದಲ್ಲಿಯೇ ಶೇ. 5ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ತಾಲೂಕು ಮಟ್ಟದಲ್ಲಿಯೂ ಸ್ಪಂದನಾ ಸಭೆ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಅಫಜಲಪುರದಲ್ಲಿ ನಡೆಸಿದ್ದಾರೆ ಎಂದು ಸಭೆ ನಂತರ ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಗುರುವಾರ ನಡೆದ ಜನಸ್ಪಂದನ ಸಭೆ ಯಶಸ್ಸಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮೂರು ತಿಂಗಳು ಅಥವಾ ಆರು ತಿಂಗಳಿಗೊಂದು ಬಾರಿ ಬೃಹತ್‌ ಮಟ್ಟದ ಜನಸ್ಪಂದನ ಸಭೆ ನಡೆಸಲು ಯೋಚಿಸಲಾಗುವುದು. ಕಲಬುರಗಿ ನಗರದಲ್ಲಿ 15 ವರ್ಷಗಳ ಹಳೆ ಮಾಸ್ಟರ್‌ ಪ್ಲ್ಯಾನ್‌ ಇದೆ. ಇದನ್ನು ಸದ್ಯದ ಜನಸಂಖ್ಯೆಗೆ ಅನುಗುಣವಾಗಿ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಡಿಎ ಮಾಸ್ಟರ್‌ ಪ್ಲ್ಯಾನ್‌ ಸಮರ್ಪಕವಾಗಿ ಕೈಗೊಳ್ಳಲು ಅರ್ಬನ್‌ ಪ್ಲ್ಯಾನರ್‌ಗಳನ್ನು ಸಂಪರ್ಕಿಸಲಾಗುತ್ತಿದೆ. ನಗರದಲ್ಲಿ ಸಮರ್ಪಕ ವಾಹನ ಸಂಚಾರದ ಯೋಜನೆ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಗೃಹ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Advertisement

ತಲಾ ಒಂದು ಕೋಟಿ ರೂ. ಬಿಡುಗಡೆ: ಕುಡಿಯುವ ನೀರಿನ ಸಂಬಂಧವಾಗಿ ಪ್ರತಿ ತಾಲೂಕಿಗೆ ಒಂದು ಕೋಟಿ ರೂ. ಬಿಡುಗಡೆಯಾಗಿದೆ. ಅದೇ ರೀತಿ ಪ್ರತಿ ಜಿಪಂ ಕ್ಷೇತ್ರಕ್ಕೆ ತಮ್ಮ ಇಲಾಖೆಯಿಂದ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮಹಾನಗರ ಪಾಲಿಕೆಗೆ ಮೊದಲ ಹಂತವಾಗಿ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಗೆ ಹಣ ಕೊರತೆಯಾಗದು. ಉದ್ಯೋಗ ಖಾತ್ರಿ ಬಾಕಿಗೆ ರಾಜ್ಯ ಸರ್ಕಾರ 450 ಟಿ ರೂ. ಬಿಡುಗಡೆ ಮಾಡಲಾಗಿದೆ. ಕ್ರಿಯಾ ಯೋಜನೆ ರೂಪಿಸಿ ಅದರಗನುಗುಣವಾಗಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಏಪ್ರಿಲ್‌ ತಿಂಗಳವರೆಗೂ ಮೇವಿನ ಕೊರತೆಯಿಲ್ಲ. ಮೇವು ಪೂರೈಕೆ ಸಂಬಂಧ ಬಳ್ಳಾರಿ ಜಿಲ್ಲೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ವಿವರಿಸಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌ ಬೇಗಂ ಇದ್ದರು. 

ಅಕ್ರಮ ಮರಳುಗಾರಿಕೆ ವಿರುದ್ಧ ಒಂದೂ ಅರ್ಜಿ ಬಂದಿಲ್ಲ ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧವಾಗಿ ಯಾವುದೇ ದೂರಿನ ಅರ್ಜಿ ಬಂದಿಲ್ಲ. ಈ ಸಂಬಂಧವಾಗಿ ಸಾರ್ವಜನಿಕರ್ಯಾರು ಅಹವಾಲು ಸಲ್ಲಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಉಸ್ತುವಾರಿ ಸಚಿವರು, ಇನ್ನೂ ಅಕ್ರಮ ಮರಳು ಸಾಗಾಣಿಕೆದಾರರು ಅರ್ಜಿ ಸಲ್ಲಿಸಲಿಕ್ಕೆ ಮುಂದೆ ಬರುವುದಿಲ್ಲವಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು

Advertisement

Udayavani is now on Telegram. Click here to join our channel and stay updated with the latest news.

Next