ಮಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ರಚನೆಯೊಂದಿಗೆ ಸಚಿವ ಸ್ಥಾನ ಆಕಾಂಕ್ಷಿಗಳ ಹಾಗೂ ರಾಜಕೀಯ ಲೆಕ್ಕಾಚಾರಗಳ ಕುತೂಹಲಕ್ಕೆ ತೆರೆಬಿದ್ದಿದೆ. ಗಮನಾರ್ಹವೆಂದರೆ, ಕರಾವಳಿಗೆ ಕಮಲ ಕಟಾಕ್ಷ ಮುಂದುವರಿದಿದ್ದು, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಒಟ್ಟು ಮೂರು ಸಚಿವ ಸ್ಥಾನಗಳೊಂದಿಗೆ ಅವಿಭಜಿತ ದ.ಕ. ಜಿಲ್ಲೆಗೆ ಬಂಪರ್ ಅವಕಾಶ ಲಭಿಸಿದೆ.
ಈ ಹಿಂದೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಸ್. ಅಂಗಾರರನ್ನು ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲೂ ಮುಂದುವರಿಸುವುದರ ಜತೆ ಯುವ ನಾಯಕ ಕಾರ್ಕಳದ ಸುನಿಲ್ ಕುಮಾರ್ ಅವರಿಗೆ ಅವಕಾಶ ಲಭಿಸಿದೆ. ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡುವೆಯೂ ಕರಾವಳಿಗೆ ಮೂರು ಸಚಿವ ಸ್ಥಾನ ಲಭಿಸಿರುವುದು ರಾಜಕೀಯವಾಗಿ ಮಹತ್ವದ ವಿಚಾರವಾಗಿದೆ.
ಕರಾವಳಿಯ ಜಿಲ್ಲೆಗಳು ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ. ಎರಡು ಜಿಲ್ಲೆಗಳ ಒಟ್ಟು 13 ಶಾಸಕರ ಪೈಕಿ 12 ಶಾಸಕರು ಹಾಗೂ ಮೂವರು ಸಂಸದರನ್ನು ಬಿಜೆಪಿ ಹೊಂದಿದೆ. ಯಡಿಯೂರಪ್ಪ ಅವರ ಸಚಿವ ಸಂಪುಟದ ಮೊದಲ ಅವಧಿಯಲ್ಲಿ ಎರಡು ಜಿಲ್ಲೆಗಳಿಗೆ ಒಂದು ಸಚಿವ ಸ್ಥಾನ ಕರಾವಳಿಯಲ್ಲಿ ಒಂದಷ್ಟು ಚರ್ಚೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದರೂ ಅನಂತರದ ಅವಧಿಗಳಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ, ಬೆಳ್ತಂಗಡಿಯ ಪ್ರತಾಪಸಿಂಹ ನಾಯಕ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ, ಸಂಪುಟ ಪುನಾರಚನೆ ವೇಳೆ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ, ಕಳೆದ ತಿಂಗಳು ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ಮತ್ತು ಇದೀಗ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳನ್ನು ನೀಡುವ ಮೂಲಕ ಕರಾವಳಿಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ.
ಹಿರಿತನಕ್ಕೆ ಮಣೆ, ಹೊಸಬರಿಗೆ ಅವಕಾಶ:
ಕರಾವಳಿಗೆ ಸಚಿವ ಸ್ಥಾನದ ಹಿಂದೆ ಇನ್ನು ಕೆಲವೇ ತಿಂಗಳಲ್ಲಿ ಎದುರಾಗಲಿರುವ ಜಿ. ಪಂ., ತಾ. ಪಂ. ಚುನಾವಣೆಗಳ ಛಾಯೆ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಸ್. ಅಂಗಾರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದರ ಮೂಲಕ ಹಿರಿತನಕ್ಕೆ ಪಕ್ಷ ಮಣೆ ಹಾಕಿರುವುದು ಸ್ಪಷ್ಟ. ಕೋಟ ಶ್ರೀನಿವಾಸ ಪೂಜಾರಿ ಅವರ ವಿಧಾನ ಪರಿಷತ್ ಸದಸ್ಯತ್ವ ಮುಂದಿನ ಜ. 6ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ಚುನಾವಣೆಯನ್ನು ಎದುರಿಸಬೇಕಾಗಿದೆ. ಸುನಿಲ್ ಕುಮಾರ್ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸುವ ಮೂಲಕ ಯುವ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದೆ. ಸುನಿಲ್ ಕುಮಾರ್ ಅವರು ವಿಧಾನಸಭೆಯಲ್ಲಿ ಮುಖ್ಯ ಸಚೇತಕ ಹೊಣೆಗಾರಿಕೆ ಹಾಗೂ ಪಕ್ಷ ಸಂಘಟನೆಯಲ್ಲಿ ಕೇರಳ ರಾಜ್ಯ ಸಹ ಪ್ರಭಾರಿ ಹುದ್ದೆಯನ್ನು ನಿರ್ವಹಿಸಿದ್ದಾರೆ.
ಖಾತೆ ಕುತೂಹಲ :
ಸಚಿವ ಸಂಪುಟದ ಬೆನ್ನಲ್ಲೇ ಇದೀಗ ಖಾತೆ ಕುತೂಹಲ ಆರಂಭಗೊಂಡಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಎಸ್. ಅಂಗಾರ ಅವರು ಮೀನುಗಾರಿಕಾ ಮತ್ತು ಬಂದರು ಖಾತೆಯನ್ನು ಹೊಂದಿದ್ದರು. ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲೂ ಇದು ಮುಂದುವರಿಯಲಿದೆಯೋ ಅಥವಾ ಹೊಸ ಖಾತೆ ದೊರೆಯಲಿದೆಯೇ ಎಂಬ ಚರ್ಚೆಗಳು ಆರಂಭಗೊಂಡಿವೆ. ನೂತನ ಸಚಿವರಾಗಿ ಆಯ್ಕೆಯಾಗಿರುವ ಸುನಿಲ್ ಕುಮಾರ್‌ಗೆ ಯಾವ ಖಾತೆ ದೊರೆಯಬಹುದು ಎಂಬ ಬಗ್ಗೆ ಕುತೂಹಲವಿದೆ.