Advertisement

ದಲಿತರ ಮನೆಯಲ್ಲಿ ಸಚಿವರ ಭೋಜನ

06:07 PM Mar 21, 2022 | Team Udayavani |

ಸುರಪುರ: ತಾಲೂಕಿನ ದೇವತ್ಕಲ್‌ ಗ್ರಾಮಕ್ಕೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಮತ್ತು ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಕಂದಾಯ ಸಚಿವ ಆರ್‌.ಅಶೋಕ ರವಿವಾರ ಬೆಳಗ್ಗೆ ಗ್ರಾಮದ ದಲಿತ ಕೇರಿಯಲ್ಲಿ ಸುತ್ತಾಡಿ ಅಲ್ಲಿಯ ಜನರ ಸಮಸ್ಯೆ ಆಲಿಸಿದರು. ನಂತರ ನಿಗದಿಯಂತೆ ದಲಿತರ ಮನೆಯಲ್ಲಿ ಊಟ ಮಾಡಿದರು.

Advertisement

ಪರಿಶಿಷ್ಟರ ಕಾಲೋನಿಯ ಬಸಪ್ಪ ಕಟ್ಟಿಮನಿ, ಬಸವರಾಜ, ಮಲ್ಲಮ್ಮ, ರಾಯಮ್ಮ, ಮೈತ್ರಮ್ಮ, ಭೀಮಬಾಯಿ ಮನೆಯವರು ಸಚಿವ ಆರ್‌. ಅಶೋಕ ಮತ್ತು ಶಾಸಕ ರಾಜುಗೌಡ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸಂಭ್ರಮದ  ವಾತಾವರಣ ನಿರ್ಮಾಣವಾಗಿತ್ತು.

ಬಿಸಿ ಜೋಳದ ರೊಟ್ಟಿ, ಖಡಕ್‌ ರೊಟ್ಟಿ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಕಾಳು ಪಲ್ಯಾ, ಮೊಳಕೆ ಕಾಳು, ಹಿರೇಕಾಯಿ ಪಲ್ಯಾ, ಮೊಸರನ್ನ, ಚಿತ್ರಾನ್ನ, ಶೇಂಗಾ ಪುಡಿ, ಮೊಸರು, ಉಪ್ಪಿನಕಾಯಿ ಚಟ್ನಿ ಸವಿದರು. ಹೊಟ್ಟೆ ತುಂಬಾ ಊಟ ಮಾಡ್ರಿ ಯಪ್ಪಾ ಎಂದು ಮನೆಯವರು ಹೇಳಿದರು.

“ಏನಮ್ಮ ಇನ್ನೆಷ್ಟು ಊಟ ಮಾಡಲಿ ನನ್ನ ಜೀವನದಲ್ಲಿ ಇಷ್ಟೊಂದು ತಿಂದಿಲ್ಲ, ನಿಮ್ಮ ಮನೆಯಲ್ಲಿ ಹೊಟ್ಟೆ ತುಂಬಾ ಊಟ ಮಾಡಿದ್ದೇನೆ ತಾಯಿ ಸಂಕೋಚ ಬೇಡ ಊಟ ಚೆನ್ನಾಗಿತ್ತು’ ಎಂದು ಸಚಿವರು ಊಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸಚಿವರು ನಮ್ಮ ಮನೆಯಲ್ಲಿ ಊಟ ಮಾಡಿದ್ದು ಖುಷಿ ತಂದಿದೆ.

ಸಚಿವರು, ಶಾಸಕರು ನಮ್ಮ ಕಾಲೋನಿಗೆ ಭೇಟಿ ನೀಡಿದ್ದು ನಮ್ಮ ಸೌಭಾಗ್ಯ. ಅವರ ಬರುವಿಕೆಯಿಂದ ಕಾಲೋನಿ ಪೂರ್ಣ ಸ್ವತ್ಛಗೊಂಡಿದೆ. ಸಚಿವರು ಮತ್ತು ನಮ್ಮ ಶಾಸಕ ರಾಜುಗೌಡ ಸಾಹೇಬ್ರು ಸಮಾಧಾನದಿಂದ ಕುಳಿತು ನಮ್ಮ ಸಮಸ್ಯೆ ಆಲಿಸಿದ್ದಾರೆ. ಗುಡಿಸಲುಗಳಲ್ಲಿ ವಾಸಿಸುವ ಪ್ರತಿಯೊಬ್ಬ ದಲಿತರಿಗೆ ಅಮೃತ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.ನಮ್ಮ ಆಸೆ ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಮನೆಯವರು ಹರ್ಷ ವ್ಯಕ್ತಪಡಿಸಿದರು.

Advertisement

ಸಚಿವರೊಂದಿಗೆ ಶಾಸಕ ರಾಜುಗೌಡ, ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌., ಜಿಪಂ ಸಿಇಒ ಅಮರೇಶ ನಾಯ್ಕ, ಸಹಾಯಕ ಆಯುಕ್ತ ಶಾ ಅಲಂ ಹುಸೇನ್‌, ಉದ್ಯಮಿ ದಯಾನಂದ ಊಟ ಮಾಡಿದರು. ಇದಕ್ಕೂ ಮುನ್ನ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಹಾಕವಿ ಲಕ್ಷೀಶ ಗ್ರಂಥಾಲಯ ಮತ್ತು ಕಿರು ವಿಜ್ಞಾನ ಪ್ರಯೋಗಾಲಯವನ್ನು ಕಂದಾಯ ಸಚಿವರು ಶಾಲೆಯ ವಿದ್ಯಾರ್ಥಿನಿಯರಿಂದ ಉದ್ಘಾಟನೆ ಮಾಡಿಸಿ ಸಂಭ್ರಮಪಟ್ಟರು.

ನಂತರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ಕೊಟ್ಟು ಸೌಲಭ್ಯ ವೀಕ್ಷಿಸಿ ಮಕ್ಕಳೊಂದಿಗೆ ಮಾತನಾಡಿದರು. ಸುರಪುರ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಶೀಲ್ದಾರ್‌ ಅಶೋಕ ಸುರಪುರಕರ, ಡಿವೈಎಸ್‌ಪಿ ಡಾ| ಬಿ. ದೇವರಾಜ್‌, ಪಿಐ ಸುನೀಲಕುಮಾರ ಮೂಲಿಮನಿ, ಹುಣಸಗಿ ಸಿಪಿಐ ಎನ್‌. ಕೆ. ದೌಲತ್‌ ಇನ್ನಿತರ ಇಲಾಖೆಗಳ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next