ಬೆಂಗಳೂರು: ತಮ್ಮ ವಿರುದ್ಧವೇ ದೂರು ನೀಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿರುದ್ಧ ಹಿರಿಯ ಸಚಿವರುಗಳು ತಿರುಗಿಬಿದ್ದಿದ್ದಾರೆ.
ರೇಣುಕಾಚಾರ್ಯ ಈ ಹಿಂದೆಯೂ ಇದೇ ರೀತಿ ಪಕ್ಷದ ಸಚಿವರ ವಿರುದ್ಧವೇ ಮಾತನಾಡಿ ಗೊಂದಲ ಸೃಷ್ಟಿಸಿ ಪ್ರತಿಪಕ್ಷಕ್ಕೆ ಆಹಾರ ಒದಗಿಸಿದ್ದರು. ಅವರು ಸಚಿವರಾದರೆ ಎಲ್ಲವೂ ಸರಿ, ಇಲ್ಲದಿದ್ದರೆ ಇಲ್ಲ ಎಂಬ ಭಾವನೆ ಸರಿಯಲ್ಲ ಎಂದು ಹಲವು ಹಿರಿಯ ಸಚಿವರು ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಗೆ ದೂರು ನೀಡಿದ್ದಾರೆ.
ಸಚಿವರ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲು ರೇಣುಕಾಚಾರ್ಯಗೆ ಅರುಣ್ ಸಿಂಗ್ ದೆಹಲಿಗೆ ಬರಲು ಬುಲಾವ್ ನೀಡಿದ್ದಾರೆ.
ಮಂತ್ರಿಗಿರಿ ಬಿಟ್ಟು ಮಾತನಾಡಲಿ: ಶಾಸಕಾಂಗ ಪಕ್ಷದ ಸಭೆಯಲೂ ಕೆಲ ಸಚಿವರ ಬಗ್ಗೆ ಧ್ವನಿ ಎತ್ತಿದ್ದೇನೆ. ಆದರೆ ಇವರಿಂದ ನಾನು ನೀತಿ ಪಾಠ ಕಲಿಯುವ ಅವಶ್ಯಕತೆಯಿಲ್ಲ. ಅವರು ಒಂದು ಬಾರಿ ಮಂತ್ರಿಗಿರಿ ಬಿಟ್ಟು ಬಂದು ಮಾತಾಡಲಿ ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂಬಳಿಯಲ್ಲಿ ಕಲ್ಲು ಕಟ್ಟಿ ಹೊಡೆಯುವ ಬದಲು ಯಾವ ಸಚಿವರು ಎಂದು ಹೇಳಲಿ ಎಂದ ಸಚಿವ ಬಿಸಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದರು. ‘ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು. ಯಾವ ಸಚಿವರು ಸ್ಪಂದಿಸಿಲ್ಲವೋ ಆ ಸಚಿವರ ಬಗ್ಗೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ’ ಎಂದರು.
ಇದನ್ನೂ ಓದಿ:ಹಿಜಾಬ್ ವಿದ್ಯಾರ್ಥಿನಿಯರ ಮೂಲಭೂತ ಹಕ್ಕು, ಎಲ್ಲೂ ಸಮವಸ್ತ್ರ ಕಡ್ಡಾಯ ಮಾಡಿಲ್ಲ: ಸಿದ್ದರಾಮಯ್ಯ
ಸೋಮವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ. ಆ ಸಂದರ್ಭದಲ್ಲಿ ನಾನು ನೂರಕ್ಕೆ ನೂರರಷ್ಟು ಸಚಿವರ ಬಗ್ಗೆ ಹೇಳಿಯೇ ಹೇಳುತ್ತೇನೆ. ಸಚಿವರ ಕಾರ್ಯವೈಖರಿ ವರಿಷ್ಠರ ಗಮನಕ್ಕೆ ತರ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.