Advertisement

ಮಳೆಹಾನಿ ಸರ್ವೇ ವರದಿ ಆಧರಿಸಿ ಸೂಕ್ತ ಕ್ರಮ: ಈಶ್ವರಪ್ಪ

06:42 PM Aug 07, 2021 | Shreeram Nayak |

ಹೊಸನಗರ: ಈ ಬಾರಿಯ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು ಖುದ್ದಾಗಿ ಪರಿಶೀಲಿಸಿದ್ದೇನೆ. ಈಗಾಗಲೇ ಜಿಲ್ಲಾಧಿಕಾರಿ
ಕೂಡ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅವರು ನೀಡುವ ಸರ್ವೇ ವರದಿಯಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ನಗರ ಹೋಬಳಿಯ ಮಳೆಹಾನಿಗೊಳಗಾದ ಬಿಚ್ಚಾಡಿ ಸೇತುವೆ, ಹೆರಟೆ- ಬಾಳ್ಮನೆ ರಸ್ತೆ, ಸಂಡೋಡಿ ಸೇತುವೆ, ಮಳಲಿ ಚಕ್ರಾನಗರ ರಸ್ತೆ
ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತೀರ್ಥಹಳ್ಳಿ, ಹೊಸನಗರ, ಸಾಗರ, ಸೊರಬ ತಾಲೂಕಿನಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಹಾನಿಯ ಬಗ್ಗೆ ಮಾಹಿತಿ
ಕಲೆಹಾಕಲಾಗುತ್ತಿದೆ. ತಾತ್ಕಾಲಿಕ ಪರಿಹಾರ ಎಲ್ಲೆಲ್ಲಿ ಆಗಬೇಕು, ಮನೆಗಳ ದುರಸ್ತಿ, ಸೇರಿದಂತೆ ಜಿಲ್ಲಾಧಿಕಾರಿಗಳು ಸರ್ವೇ ವರದಿ
ಸಿದ್ಧಪಡಿಸುತ್ತಿದ್ದಾರೆ. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುನರ್ವಸತಿ: ಈಗಾಗಲೇ ಅಂಡಗದೋದೂರು ಗ್ರಾಪಂನಲ್ಲಿ ಪ್ರವಾಹಕ್ಕೊಳಗಾದ ಕುಟುಂಬಗಳನ್ನು ಗಂಜಿ ಕೇಂದ್ರದಲ್ಲಿ ಇರಿಸಲಾಗಿದೆ. ಈಗ ವಾಸದಲ್ಲಿರುವ ಪ್ರದೇಶ ಅರಣ್ಯ ವ್ಯಾಪ್ತಿಗೆ ಸೇರಿದ್ದು ಅಲ್ಲಿ ಜಾಗ ಕೊಡಲು ಸಾಧ್ಯವಿಲ್ಲ. ಅದೇ ಗ್ರಾಪಂನಲ್ಲಿನ ಕಂದಾಯ ಭೂಮಿಯನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಜಮೀರ್ ಮನೆ ಕಟ್ಟಿದ್ದಾರೆ ಅಷ್ಟೆ,ಹಣ ದುರುಪಯೋಗ ಎಲ್ಲಿಆಗಿದೆ?:ED ದಾಳಿ ವಿರುದ್ಧ ಸಿದ್ದು ಟೀಕೆ

Advertisement

ಸಂಡೋಡಿ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ: ಸಂಡೋಡಿ ಸೇತುವೆ ಶಿಥಿಲವಾಗಿದ್ದು ಈ ಹಿಂದೆ ಕೆಪಿಸಿ 18 ಲಕ್ಷ ಅನುದಾನ ನೀಡಿತ್ತು. ಆ
ಹಣದಲ್ಲಿ ಹೊಸ ಸೇತುವೆ ನಿರ್ಮಾಣ ಅಸಾಧ್ಯ ಎಂದು ವಾಪಸ್‌ ಕಳಿಸಲಾಗಿದೆ. ಈ ಬಗ್ಗೆ ಕ್ರಮದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಕೆಪಿಸಿ ಎಂಡಿ ಪೊನ್ನುರಾಜ್‌ ಜೊತೆ ಮಾತುಕತೆ ನಡೆಸುತ್ತೇನೆ. ಇಲ್ಲಿ ಕೆಪಿಸಿ ಅಥವಾ ಸರ್ಕಾರ ಎನ್ನುವುದು ಮುಖ್ಯವಲ್ಲ. ಕೆಪಿಸಿಯನ್ನು ಒಳಗೊಂಡಂತೆ
ಸರ್ಕಾರವಾಗಿರುವ ಕಾರಣ ಸೇತುವೆ ನಿರ್ಮಾಣ ಸಂಬಂಧ ಗಮನಹರಿಸಲಾಗುವುದು ಎಂದರು.

ಹುಲಿಕಲ್‌ ಘಾಟ್‌ ಅಭಿವೃದ್ಧಿಗೆ ಕ್ರಮ:
ನೂತನ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಹುಲಿಕಲ್‌ ಘಾಟ್‌ ರಸ್ತೆ ಅತ್ಯಂತ ಮಹತ್ವದ ಸಂಪರ್ಕವಾಗಿದೆ. ಈಗಾಗಲೇ ವಿಶೇಷ ಪ್ರಯತ್ನದಲ್ಲಿ ರೂ.4 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಶಿರಾಡಿ, ಚಾರ್ಮಾಡಿ ಬಂದ್‌ ಆದಾಗ ಆಪತಾºಂಧವನಂತೆ ಬರುವ ಹುಲಿಕಲ್‌ ಘಾಟ್‌ ರಸ್ತೆ, ನಗರ ಹುಲಿಕಲ್‌ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ನಾನು ಕೂಡ ಸಚಿವನಾಗಿ ಸರ್ಕಾರದ ಒಂದು ಭಾಗವಾಗಿದ್ದು ವಿಶೇಷ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಚಿವನಾಗಿ ಆಯ್ಕೆಯಾದರೂ ಒಂದು ದಿನ ಕೂಡ ಬೆಂಗಳೂರಿನಲ್ಲಿ ಇರಲು ಸಾಧ್ಯವಾಗಲಿಲ್ಲ. ಈ ಭಾಗದ ಜನರು ಮಳೆಹಾನಿಗೆ ತುತ್ತಾಗಿ ಚಡಪಡಿಸುತ್ತಿರುವ ಕಾರಣ ಉಸ್ತುವಾರಿ ಸಚಿವರೊಂದಿಗೆ ಭೇಟಿ ನೀಡಲಾಗಿದೆ. ಇದು ನಮ್ಮ ಜವಾಬ್ದಾರಿ ಎಂದರು. ಸಚಿವ ಸ್ಥಾನ
ನೂರಕ್ಕೆ ನೂರು ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಕೊನೆ ಘಳಿಗೆಯಲ್ಲಿ ಮಾಧ್ಯಮಗಳ ವರದಿಯಿಂದ ಆತಂಕ ಸೃಷ್ಟಿಯಾಗಿತ್ತು. ನಾಯಕರ ಮೇಲೆ, ಸಂಘಟನೆಯ ಮೇಲೆ ಇಟ್ಟ ವಿಶ್ವಾಸ ಹುಸಿಯಾಗಲಿಲ್ಲ. ಯಾವುದೇ ಖಾತೆ ಕೊಟ್ಟರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು. ಇದಕ್ಕೂ ಮುನ್ನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಸ್ಥಳೀಯರು ವಿವಿಧ ಬೇಡಿಕೆಯನ್ನು ಆಧರಿಸಿ ಅಹವಾಲು ಸಲ್ಲಿಸಿದರು. ಜಿಲ್ಲಾ ಧಿಕಾರಿ ಕೆ.ಬಿ.ಶಿವಕುಮಾರ್‌, ಎಸ್ಪಿ ಲಕ್ಷ್ಮೀಪ್ರಸಾದ್‌, ತಹಶೀಲ್ದಾರ್‌ ವಿ.ಎಸ್‌. ರಾಜೀವ್‌, ತಾಪಂ ಇಒ ಸಿ.ಆರ್‌.ಪ್ರವೀಣ್‌, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next