ಪಣಜಿ: ಕಳೆದ ವರ್ಷ ಗೋವಾದ ಎಂಟು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದರು. ಈ ಎಂಟು ಶಾಸಕರಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾದರೆ ಯಾವ ಇಬ್ಬರು ಶಾಸಕರಿಗೆ ಅವಕಾಶ ಸಿಗಲಿದೆ ಎಂಬ ಊಹಾಪೋಹ ಗೋವಾ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹಿರಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಹಾಗೂ ಶಾಸಕ ಅಲೆಕ್ಸ್ ಸಿಕ್ವೇರಾ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ದಿಗಂಬರ್ ಕಾಮತ್, ಅಲೆಕ್ಸ್ ಸಿಕ್ವೇರಾ, ರುಡಾಲ್ಫ್ ಫರ್ನಾಂಡಿಸ್ , ಸಂಕಲ್ಪ್ ಅಮೋನ್ಕರ್, ದಿಲಾಯಲಾ ಲೋಬೋ, ಮೈಕಲ್ ಲೋಬೋ, ರಾಜೇಶ್ ಫಲ್ದೇಸಾಯಿ ಮತ್ತು ಕೇದಾರ್ ನಾಯ್ಕ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದರೆ ಇದುವರೆಗೂ ಸಂಪುಟ ಪುನರ್ ರಚನೆಯಾಗದ ಕಾರಣ ಇವರು ಸಚಿವ ಸ್ಥಾನದಿಂದ ವಂಚಿತರಾಗಿದ್ದರು.
ಇದೀಗ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಲಭಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಸುಮಾರು ಐದಾರು ತಿಂಗಳಿಂದ ಸಚಿವ ಸಂಪುಟ ಪುನರ್ರಚನೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ. ಆದರೆ ಇನ್ನೂ ಸಚಿವ ಸಂಪುಟ ವಿಸ್ತರಣೆ ಅಥವಾ ಸಚಿವ ಸಂಪುಟದಲ್ಲಿ ಬದಲಾವಣೆ ಆಗಿಲ್ಲ. ಇದರಿಂದಾಗಿ ಕೆಲ ಶಾಸಕರಲ್ಲಿ ಅಸಮಾಧಾನದ ಮಾತು ಕೇಳಿಬಂದಿದೆ. ಬಿಜೆಪಿ ಸೇರ್ಪಡೆಯಾದ ಶಾಸಕರಲ್ಲಿ ಕೇವಲ ಇಬ್ಬರು ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಬಿಜೆಪಿ ಕೇಂದ್ರ ನಾಯಕರು ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ವಾರಗಳಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೋವಾದ ಫರ್ಮಾಗುಡಿಯಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದ್ದರು. ಈ ವೇಳೆ ದಿಗಂಬರ ಕಾಮತ್ ಜತೆ ಚರ್ಚಿಸಿದ್ದರು. ಕಾಮತ್ ಕೂಡ ದೆಹಲಿಗೆ ಭೇಟಿ ನೀಡಿ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ದಕ್ಷಿಣ ಗೋವಾದಲ್ಲಿ ಬಿಜೆಪಿಯನ್ನು ಬಲಪಡಿಸಲು ಕಾಮತ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಅಲೆಕ್ಸ್ ಸಿಕ್ವೇರಾ ಅವರು ನುವೆಮ್ ಕ್ಷೇತ್ರದ ಮಾಜಿ ಸಚಿವ ಮತ್ತು ಶಾಸಕರಾಗಿದ್ದಾರೆ. ಅಲ್ಪಸಂಖ್ಯಾತರ ಪ್ರತಿನಿಧಿಗಳಾಗಿ ಅವರಿಗೆ ಸಚಿವ ಸ್ಥಾನ ನೀಡಬಹುದು ಎಂದು ಹೇಳಲಾಗುತ್ತಿದೆ. ರಾಜ್ಯ ಸಚಿವ ಸಂಪುಟದಲ್ಲಿ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾರೆ, ಈಗಾಗಲೇ ಇರುವ ಸಚಿವರನ್ನು ಅವರ ಸಚಿವ ಸ್ಥಾನದಿಂದ ಕೈ ಬಿಡುವ ಅನಿವಾರ್ಯತೆಯಿದೆ. ಇದರಿಂದಾಗಿ ಬಿಜೆಪಿ ಸಚಿವರಲ್ಲಿಯೂ ತಮ್ಮ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಾಗಿದೆ.