Advertisement
ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಸಿಂಹಪಾಲು ಪಡೆದಿದ್ದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಪ್ರಾತಿನಿಧ್ಯದ ಲೆಕ್ಕಾಚಾರ ಆರಂಭವಾಗಿದೆ.
Related Articles
Advertisement
ಕಾಂಗ್ರೆಸ್-ಜೆಡಿಎಸ್ ಸರಕಾರದ ಪತನಕ್ಕೆ ಕಾರಣರಾದ ಜಿಲ್ಲೆಯ ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ಯಡಿಯೂರಪ್ಪ ಸರಕಾರದಲ್ಲಿ ನಿರೀಕ್ಷೆಯಂತೆ ಸಚಿವ ಸ್ಥಾನ ಪಡೆದಿದ್ದರು. ರಮೇಶ ಜಾರಕಿಹೊಳಿ ತಮ್ಮ ಬೇಡಿಕೆಯಂತೆ ನೀರಾವರಿ ಖಾತೆ ಸಹ ಪಡೆದಿದ್ದರು. ಲಕ್ಷ್ಮಣ ಸವದಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ತಮ್ಮ ಪ್ರಭಾವ ಬಳಸಿ ಸಚಿವರಾಗಿದ್ದಲ್ಲದೆ ಉಪಮುಖ್ಯಮಂತ್ರಿ ಹುದ್ದೆ ಪಡೆದು ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಇದಾದ ಬಳಿಕ ಸತತ ಪ್ರಯತ್ನದಿಂದ ಉಮೇಶ ಕತ್ತಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇನ್ನೊಂದು ಕಡೆ ಮಹಿಳಾ ಕೋಟಾದಲ್ಲಿ ಶಶಿಕಲಾ ಜೊಲ್ಲೆ ಸಚಿವರಾಗಿದ್ದರು. ಈಗ ಇವರೆಲ್ಲರ ಸ್ಥಾನ ಏನು ಎಂಬ ಕುತೂಹಲ ಮೂಡಿದೆ.
ಯಡಿಯೂರಪ್ಪ ಸರಕಾರದಲ್ಲಿ ಬೆಂಗಳೂರು ನಂತರ ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದ್ದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಪ್ರಕರಣವೊಂದರಲ್ಲಿ ಸಿಲುಕಿದ್ದ ರಮೇಶ ಚಾರಕಿಹೊಳಿ ಅವರು ವಿರೋಧ ಪಕ್ಷದವರ ಒತ್ತಡ ಮತ್ತು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಾರಿ ರಮೇಶ ಜಾರಕಿಹೊಳಿ ಸಚಿವ ಸ್ಥಾನ ಪಡೆಯುವರೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.