Advertisement

ಸಚಿವ ವಿನಯ್‌ ಕುಲಕರ್ಣಿ ವಜಾಗೊಳಿಸಿ: ಬಿಎಸ್‌ವೈ

11:18 AM Nov 26, 2017 | Team Udayavani |

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್‌ ಗೌಡ ಹತ್ಯೆಯಲ್ಲಿ ಸಚಿವ ವಿನಯ್‌ ಕುಲಕರ್ಣಿ ಪಾತ್ರವಿರುವ ಬಗ್ಗೆ ಸಾಕ್ಷ್ಯಗಳು ಬೆಳಕಿಗೆ ಬಂದರೂ ಅವರ ರಾಜೀನಾಮೆ ಪಡೆಯದ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಮಾನ, ಮರ್ಯಾದೆ, ಜವಾಬ್ದಾರಿ ಇದ್ದರೆ ತಕ್ಷಣ ವಿನಯ್‌ ಕುಲಕರ್ಣಿ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿ ಶಾಮೀಲಾಗಿದ್ದಾರೆ ಎಂಬುದಕ್ಕೆ ದಿನಕ್ಕೊಂದು ಸಾಕ್ಷ್ಯಗಳು ಸಿಗುತ್ತಿವೆ. ಯೋಗೇಶ್‌ ಗೌಡನ ಕುಟುಂಬಕ್ಕೆ ನೆರವಾದ ವಕೀಲರಿಗೆ ಸಚಿವರು ನೇರವಾಗಿ ಬೆದರಿಕೆ ಹಾಕಿದ ವಿಷಯವೂ ಬಹಿರಂಗವಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ನ್ಯಾ.ಮೋಹನ ಶಾಂತನಗೌಡರ್‌ ಅವರೂ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿಗಳು ಸಚಿವರನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ಗಮನಿಸಿದಾಗ ಅವರು ಆರೋಪಿಗಳಿಗೆ ರಕ್ಷಣೆ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಕಿಡಿ ಕಾರಿದರು.

ಸುಲ್ಫಿ ಅಮಾನತು ಮಾಡಿ: ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಆತನ ಕುಟುಂಬಕ್ಕೆ ನೆರವಾದ ವಕೀಲರಿಗೆ ಸಚಿವ ವಿನಯ್‌ ಕುಲಕರ್ಣಿ ದೂರವಾಣಿ ಮೂಲಕ ಬೆದರಿಕೆಯೊಡ್ಡಿದ್ದಾರೆ. ಆದ್ದರಿಂದ ಸಚಿವರು ಮತ್ತು ವಕೀಲರ ಮೊಬೈಲ್‌ಗ‌ಳನ್ನು ಪಡೆದು ಅದರಲ್ಲಿರುವ ಮಾತುಗಳನ್ನು ಧ್ವನಿಪರೀಕ್ಷೆಗೆ ಕಳುಹಿಸಬೇಕು.

ಮೇಲಧಿಕಾರಿಗಳು ಸೂಚಿಸದಿದ್ದರೂ ಬೆಳಗಾವಿ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಅವರು ಧಾರವಾಡಕ್ಕೆ ಬಂದು ಸಚಿವರ ಪರವಾಗಿ ಯೋಗೇಶ್‌ ಗೌಡ ಕುಟುಂಬದ ಜತೆ ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದು, ಈ ಹಿನ್ನೆಲೆಯಲ್ಲಿ ತುಳಜಪ್ಪ ಸುಲ್ಫಿ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕೆಂದು ಯಡಿಯೂರಪ್ಪ ಆಗ್ರಹಿಸಿದರು.

Advertisement

ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಾಳೆ: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಸಚಿವ ವಿನಯ್‌ ಕುಲಕರ್ಣಿ ಮತ್ತು ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕಾರಣವಾಗಿರುವ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಸೋಮವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಜ್ಯ ಚುನಾವಣಾ ಸಹ ಉಸ್ತುವಾರಿ ಪಿಯೂಷ್‌ ಗೋಯೆಲ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಈ ಎರಡೂ ಪ್ರಕರಣಗಳನ್ನು ರಾಜಕೀಯವಾಗಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ನಿರಂತರ ಆರೋಪಗಳನ್ನು ಮಾಡಲು ಕೂಡ ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next