ಬಳ್ಳಾರಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸಚಿವ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಕ್ಷದ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಎಚ್.ಹನುಮಂತಪ್ಪ ಮಾತನಾಡಿ, 2016ರ ಜೂನ್ 7 ರಂದು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಗಣಪತಿ ಅವರು ಸಚಿವ ಜಾರ್ಜ್ ಹಾಗೂ ಗುಪ್ತದಳ ಅಧಿಕಾರಿಗಳು ಕಿರುಕುಳ ನೀಡಿ, ಕರ್ತವ್ಯ ನಿರ್ವಹಣೆಗೆ ತೊಂದರೆ ಕೊಡುತ್ತಿದ್ದರು ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕೆಂದು ಬಿಜೆಪಿ ಹಲವು ಹೋರಾಟ ಹಮ್ಮಿಕೊಂಡಿತ್ತು. ಆದರೆ, ತನಿಖೆಗೆ ಸಿಬಿಐಗೆ ವಹಿಸದ ಸರ್ಕಾರ ಸಿಐಡಿಗೆ ವಹಿಸಿ ಕೈ ತೊಳೆದುಕೊಂಡಿತ್ತು ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಹರಗೌಡ ಗೋನಾಳ್, ಕೆ.ಎ.ರಾಮಲಿಂಗಪ್ಪ, ಎ.ತಿಮ್ಮಾರೆಡ್ಡಿ, ಪಾಲಿಕೆ ಸದಸ್ಯರಾದ ಗೋವಿಂದರಾಜುಲು, ಶ್ರೀನಿವಾಸ ಮೋತ್ಕರ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.