Advertisement

ಕಾಯಂ ಪೀಠ ನಿರ್ಮಾಣ: ಕತ್ತಿ ಭರವಸೆ

05:54 PM Feb 07, 2021 | Team Udayavani |

ಬೆಳಗಾವಿ: ಮಂಜೂರಾಗಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾಯಂ ಪೀಠವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯ ಜಿಪಂ ಹಳೆಯ ಕಟ್ಟದಲ್ಲಿ ನಿರ್ಮಾಣ  ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಉಮೇಶ ಕತ್ತಿ ತಿಳಿಸಿದರು.

Advertisement

ಇಲ್ಲಿಯ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪೀಠದ ಕಟ್ಟಡ ನಿರ್ಮಾಣ ಕುರಿತು ಜಿಲ್ಲಾ ವಕೀಲರ ಸಂಘದ ಸಭಾಭವನದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸದ್ಯದಲ್ಲೇ ಕಟ್ಟಡದ ಕಾಮಗಾರಿ ಚಾಲನೆ ನೀಡಲಾಗುವುದು ಎಂದರು.

ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ. ಕಟ್ಟಡ ನಿರ್ಮಾಣಕ್ಕೆ  ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ ಸಲ್ಲಿಸಬೇಕು. ಬಜೆಟ್‌ನಲ್ಲಿ  ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು. ಗ್ರಾಹಕರ ವ್ಯಾಜ್ಯಗಳ ತ್ವರಿತ  ವಿಲೇವಾರಿಗಾಗಿ ಕ್ರಮ ವಹಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗುವುದು ಎಂದರು.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ನಗರದ ಕೋರ್ಟ್‌ ಆವರಣದಲ್ಲೇ ರಾಜ್ಯ ಗ್ರಾಹಕ ವ್ಯಾಜ್ಯಗಳ ಆಯೋಗದ ಕಟ್ಟಡ ನಿರ್ಮಾಣವಾಗಬೇಕು. ವಕೀಲರ ಹೋರಾಟ ನೋಡಿದರೆ ಭಯವಾಗುತ್ತದೆ. ಮತ್ತೆ ಆ ತರಹ ಹೋರಾಟ ಆಗಬಾರದೆಂದು ಸಚಿವರನ್ನು ಕರೆಯಿಸಲಾಗಿದೆ ಎಂದರು.

ವಕೀಲ ಎಂ.ಬಿ. ಝಿರಲಿ ಮಾತನಾಡಿ, ಹುಕ್ಕೇರಿಯಲ್ಲಿ ಇರುವಂತೆ ಬೆಳಗಾವಿ ನ್ಯಾಯಾಲಯದಲ್ಲೂ ಇ-ಗ್ರಂಥಾಲಯ ಸ್ಥಾಪನೆಗೆ ಸಚಿವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Advertisement

ವಕೀಲ ಎನ್‌.ಆರ್‌. ಲಾತೂರ್‌ ಮಾತನಾಡಿ, ಬೆಳಗಾವಿಯಲ್ಲಿ ಎರಡು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ ಇವೆ. ಮೂಲ ಸೌಲಭ್ಯ  ಕೊರತೆ ಹಾಗೂ ಹುದ್ದೆಗಳು ಖಾಲಿಯಿಂದಾಗಿ 4,771 ಪ್ರಕರಣಗಳು ಬಾಕಿ ಇವೆ. ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪೀಠವನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ :ವೈಚಾರಿಕತೆಯಿಂದ ಸದೃಢ ಸಮಾಜ ನಿರ್ಮಾಣ

ಸಂಘದ ಉಪಾಧ್ಯಕ್ಷರಾದ ಸಿ.ಟಿ. ಮಜ್ಜಗಿ, ಗಜಾನನ ಪಾಟೀಲ, ಪ್ರಧಾನ ಕಾರ್ಯದರ್ಶಿ ಆರ್‌.ಸಿ. ಪಾಟೀಲ, ವಕೀಲರಾದ ಶಿವಪುತ್ರ ಫಟಕಳ, ಪ್ರವೀಣ ಕೊಪ್ಪದ, ಯಶವಂತ ಲಮಾಣಿ, ರೋಹಿತ ಲಾತೂರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next