ನೆಲ್ಯಾಡಿ: ಗುಂಡ್ಯ ಹೊಳೆ ಉಕ್ಕಿ ಹರಿದು ಹಾನಿಗೊಳಗಾದ ನೆರೆಪೀಡಿತ ಪ್ರದೇಶ ಹಾಗೂ ಶಿರಾಡಿ ಘಾಟಿಗೆ ಸಚಿವ ಯು.ಟಿ. ಖಾದರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಉದನೆಯಲ್ಲಿ ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಶಿರಾಡಿ ಗ್ರಾಮ ಕರಣಿಕ ಹೆರಾಲ್ಡ್ ಮೋನಿಸ್ ಅವರಿಂದ ಹಾನಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಗುಂಡ್ಯದಿಂದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಜತೆಗೆ ಶಿರಾಡಿ ಘಾಟಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಹೆದ್ದಾರಿ ಬದಿಯ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದು ರಸ್ತೆ ಸಂಚಾರ ಬಂದ್ ಆಗಿದ್ದರಿಂದ ತಂಡಕ್ಕೆ ಹೆದ್ದಾರಿ ಸಂಪೂರ್ಣ ಪರಿಶೀಲನೆಗೆ ತೊಂದರೆಯಾಗಿದೆ. ಗುಡ್ಡ ಕುಸಿಯುತ್ತಲೇ ಇರುವುದರಿಂದ ಮಳೆ ನಿಂತ ಬಳಿಕ ಮಣ್ಣು ತೆರವು ಹಾಗೂ ದುರಸ್ತಿ ಕಾರ್ಯ ನಡೆಸುವ ನಿರ್ಧಾರಕ್ಕೆ ಸಚಿವರು ಹಾಗೂ ಅಧಿ ಕಾರಿಗಳ ತಂಡ ಬಂದಿದೆ.
ಇಚ್ಲಂಪಾಡಿಗೆ ಭೇಟಿ
ಸಚಿವ ಖಾದರ್ ಶುಕ್ರವಾರ ಸಂಜೆ ಇಚ್ಲಂಪಾಡಿಗೆ ತೆರಳಿ ಮುಳುಗಡೆಗೊಂಡಿದ್ದ ಇಚ್ಲಂಪಾಡಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಉಳ್ಳಾಕ್ಲು ದೈವಸ್ಥಾನದ ಬಗ್ಗೆಯೂ ಮಾಹಿತಿ ಪಡೆದರು. ದೇವಸ್ಥಾನಕ್ಕೆ ಸಂಪರ್ಕಕ್ಕೆ ಕಾಲುಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ತಾ.ಪಂ. ಮಾಜಿ ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ಸ್ಥಳೀಯ ಮುಖಂಡರಾದ ಜಾರ್ಜ್ ಕುಟ್ಟಿ ಉಪದೇಶಿ, ವರ್ಗೀಸ್ ಅಬ್ರಹಾಂ ಸಚಿವರಿಗೆ ಮಾಹಿತಿ ನೀಡಿದರು.
ಸಚಿವರ ಜತೆಗೆ ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ತಾ.ಪಂ. ಸದಸ್ಯರಾದ ಉಷಾ ಅಂಚನ್, ಆಶಾ ಲಕ್ಷ್ಮಣ್, ಕೆ.ಟಿ. ವಲ್ಸಮ್ಮ, ಕೆಪಿಸಿಸಿ ಸದಸ್ಯ ಕೆ.ಪಿ. ಥೋಮಸ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಅಬ್ದುಲ್ ನಾಸೀರ್ ಹೊಸಮನೆ, ಶಿರಾಡಿ ಗ್ರಾ.ಪಂ. ಸದಸ್ಯ ಎಂ.ಕೆ. ಪೌಲೋಸ್ ಇದ್ದರು.