ಕಾರ್ಕಳ: ಸರಕಾರದ ಅನುದಾನವಿಲ್ಲದೆ ಕಂಬಳ ಕ್ರೀಡೆ ನಡೆಯುವ ಕಾಲವೊಂದಿತ್ತು. ಆದರೆ ರಾಜ್ಯ ಸರಕಾರ ಕಂಬಳ ಕ್ರೀಡೆಯನ್ನು ಗ್ರಾಮೀಣ ಕ್ರೀಡೆಗೆ ಸೇರ್ಪಡೆಗೊಳಿಸಿ ಈಗ ಅನುದಾನ ನೀಡುತ್ತಿದೆ. ಸರಕಾರದ ನೇತೃತ್ವದಲ್ಲೇ ಕಂಬಳಕ್ಕೆ ಪ್ರೋತ್ಸಾಹ ಸಿಗುತ್ತಿದ್ದು, ಕ್ರೀಡೆಗೆ ಆಧುನಿಕ ಸ್ಪರ್ಶ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಮಿಯ್ನಾರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಸಹಯೋಗದಲ್ಲಿ ಮಿಯಾರಿನಲ್ಲಿ ನಡೆದ ಲವ-ಕುಶ ಜೋಡುಕರೆ ರಾಜ್ಯ ಮಟ್ಟದ ಬಯಲು ಕಂಬಳ ಮಹೋತ್ಸವ ಹಾಗೂ ಲವ- ಕುಶ ನೂತನ ಸಭಾ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಕರಾವಳಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಭಾಸ್ಕರ ಕೋಟ್ಯಾನ್, ಮಿಯ್ನಾರು ಗ್ರಾ.ಪಂ. ಅಧ್ಯಕ್ಷ ಗಿರೀಶ್ ಅಮೀನ್, ಉದಯ ಕುಮಾರ್ ಮುನಿಯಾಲು, ಎಡಿಸಿ ವೀಣಾ ಬಿ.ಎನ್., ಜಿಲ್ಲಾ ಕ್ರೀಡಾಧಿಕಾರಿ ರೋಶನ್ ಶೆಟ್ಟಿ, ಗುಣಪಾಲ ಕಡಂಬ ಉಪಸ್ಥಿತರಿದ್ದರು.
ಸಮ್ಮಾನ
ಎಸ್. ಉದಯ್ ಕೋಟ್ಯಾನ್ ಪ್ರಸ್ತಾವನೆಗೈದರು. ಪ್ರಶಾಂತ್ ಶೆಣೈ ನಿರ್ವಹಿಸಿದರು. ಕಂಬಳ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅನುದಾನ ನೀಡಿದ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.
ದಾಖಲೆಯ ಜೋಡಿ ಕೋಣಗಳು ಭಾಗಿ
ದ.ಕ., ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳದ ಪೈಕಿ ಮಿಯ್ನಾರು ಕಂಬಳ ಬಹಳ ಪ್ರಸಿದ್ಧಿ ಪಡೆದಿದೆ. ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ ಕಂಬಳದಲ್ಲಿ 258 ಜೋಡಿ ಕೋಣಗಳು ಭಾಗವಹಿಸಿದ್ದರೆ ಮಿಯ್ನಾರು ಕಂಬಳದಲ್ಲಿ 264 ಜೋಡಿ ಭಾಗವಹಿಸುವ ಮೂಲಕ ದಾಖಲೆ ಬರೆದಿದೆ.