ಸುರಪುರ: ಸ್ವಾತಂತ್ರ್ಯ ಚಳವಳಿಯಲ್ಲಿ ಮಡಿದವರನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸುದೀರ್ಘ ಅವಧಿಗೆ ದೇಶ ಮತ್ತು ರಾಜ್ಯವನ್ನಾಳಿದ ಯಾವುದೇ ಸರಕಾರಗಳು ಹುತಾತ್ಮರನ್ನು ನೆನಪಿಸುವ ಕೆಲಸ ಮಾಡಲಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಈ ದಿಶೆಯಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದೆ. ಸ್ವಾತಂತ್ರ್ಯ ಸೇನಾನಿ ಮತ್ತು ಹುತಾತ್ಮರನ್ನು ಸ್ಮರಿಸುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ-ತಾಲೂಕು ಆಡಳಿತ ಏರ್ಪಡಿಸಿದ್ದ “ಅಮೃತ ಭಾರತಿಗೆ ಕನ್ನಡದಾರತಿ’ ಉದ್ಘಾಟಿಸಿ ಅವರು ಮಾತನಾಡಿದರು.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸುರಪುರದಿಂದಲೇ ಆರಂಭವಾದದ್ದು ಸ್ಮರಣೀಯ. ಇಲ್ಲಿಯ ಅರಸರ ಚರಿತ್ರೆ ಇತಿಹಾಸದ ಪುಟ ಸೇರದಿರುವುದು ವಿಪರ್ಯಾಸ. ಆಳುವ ಸರಕಾರಗಳ ತಪ್ಪಿನಿಂದ ಅನೇಕ ಅರಸರ ಇತಿಹಾಸ ಮರೆಯಾಗಿ ಹೋಗಿದೆ. ಇಂಥ ಕಾರ್ಯಕ್ರಮದ ಮೂಲಕ ನೈಜ ಇತಿಹಾಸ ಮತ್ತು ನಮ್ಮ ಸನಾತನ ಪರಂಪರೆ-ಸಂಸ್ಕೃತಿ ಯುವ ಜನಾಂಗಕ್ಕೆ ತಿಳಿಸಿ ಕೊಡುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಹನ್ನೆರಡು ವರ್ಷದ ಬಾಲಕ ವೀರ ಸಾವರ್ಕರ್ ನೀಡಿದ ಸೇವೆ ಯಾರೂ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರಿಂದ ಎರಡು ಬಾರಿ ಕರಿ ನೀರಿನ ಶಿಕ್ಷೆಗೊಳಗಾಗಿ ಅನುಭವಿಸಿದ ಜೈಲು ಶಿಕ್ಷೆ, ಅವರ ದೇಶಪ್ರೇಮ ಸ್ಮರಣೀಯ. ಅವರ ಜನ್ಮದಿನ ನಿಮಿತ್ತ ರಾಜ್ಯದ 75 ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಾಸಕ ರಾಜು ಗೌಡ ಮಾತನಾಡಿದರು.ನಗರದ ಆರೋಗ್ಯ ಕೇಂದ್ರ ಆವರಣದ 1857ರ ಸ್ವಾತಂತ್ರ್ಯ ಚಳವಳಿ ಸ್ಮರಣಾರ್ಥ ಸ್ಮಾರಕ ವೀರಗಲ್ಲು ಕಂಬದ ಪಕ್ಕದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸವಿನೆನಪಿಗಾಗಿ ಸ್ಮಾರಕಕ್ಕೆ ಶಿಲಾನ್ಯಾಸವನ್ನು ಸಚಿವರು ನೆರವೇರಿಸಿದರು. ಇದೇ ವೇಳೆ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಅವರನ್ನು ಸಚಿವರು ಸಮ್ಮಾನಿಸಿದರು.