Advertisement

ರೈತರಿಗೆ-ವಿದ್ಯಾರ್ಥಿಗಳಿಗೆ ವಿದ್ಯುತ್‌ “ಕಾಟ’ಇಲ್ಲ: ಸುನೀಲ್‌ ಕುಮಾರ್‌

08:38 PM Feb 13, 2023 | Team Udayavani |

ವಿಧಾನ ಪರಿಷತ್ತು: ರಾಜ್ಯದ ವಿದ್ಯುತ್‌ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಿದ್ಧವಿದ್ದು, ಈ ಬಾರಿ ಬೇಸಿಗೆಯಲ್ಲಿ ರೈತರಿಗೆ ಮತ್ತು ಪರೀಕ್ಷೆ ವೇಳೆ ಮಕ್ಕಳಿಗೆ ತೊಂದರೆ ಆಗದಂತೆ ವಿದ್ಯುತ್‌ ಪೂರೈಸಲಾಗುವುದು. ಜತೆಗೆ ವಿದ್ಯುತ್‌ ದರ ಹೆಚ್ಚಳದ ಯಾವ ಪ್ರಸ್ತಾಪವೂ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ, ಬಿಜೆಪಿಯ ಡಿ.ಎಸ್‌. ಅರುಣ್‌ ಹಾಗೂ ಎಸ್‌.ರುದ್ರೇಗೌಡ, ಲಕ್ಷ್ಮಣ ಸವದಿ ಅವರ ಪ್ರಶ್ನೆಗಳಿಗೆ ಮತ್ತು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯ ನಾಗರಾಜ್‌ ಯಾದವ್‌ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸಿದರು.

ರಾಜ್ಯದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ವಿದ್ಯುತ್‌ ಬೇಡಿಕೆ 14,818 ಮೆ.ವ್ಯಾ ಇತ್ತು. ಈ ವರ್ಷ ಫೆಬ್ರವರಿಯಲ್ಲಿ 15,016 ಮೆ.ವ್ಯಾ ಇದೆ. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಬೇಡಿಕೆ 15,500 ಮೆ.ವ್ಯಾ ಆಗಬಹುದು ಎಂದು ಅಂದಾಜಿಸಲಾಗಿದೆ. ವಿದ್ಯುತ್‌ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ರೈತರಿಗೆ 7 ತಾಸು ಅನಿರ್ಬಂಧಿತ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡಬೇಕು ಎಂಬುದು ಸರ್ಕಾರದ ಆದ್ಯತೆಯಾಗಿದೆ. ಅದೇ ರೀತಿ ಪರೀಕ್ಷೆ ಸಂದರ್ಭದಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ ವಿದ್ಯುತ್‌ ಪೂರೈಕೆ ಮಾಡಲಾಗುವುದು. ಹಸಿರು ವಿದ್ಯುತ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 2030ರ ವೇಳೆಗೆ ಎಷ್ಟು ವಿದ್ಯುತ್‌ ಬೇಕಾಗಬಹುದೆಂಬ ಕಲ್ಪನೆ ಇಟ್ಟುಕೊಂಡು ಹೆಜ್ಜೆ ಇಡುತ್ತಿದ್ದೇವೆ. ಸೌರ ವಿದ್ಯುತ್‌ ಮತ್ತು ಪವನ್‌ ವಿದ್ಯುತ್‌ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಸೌರ ವಿದ್ಯುತ್‌ ಮೇಲ್ಛಾವಣಿ ಅಳವಡಿಕೆಗೂ ಉತ್ತೇಜನ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ 2022ರ ಡಿಸೆಂಬರ್‌ ಅಂತ್ಯಕ್ಕೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ 33.11 ಲಕ್ಷ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, ರೈತರಿಂದ ಸಾವಿರಾರು ಬೇಡಿಕೆ ಅರ್ಜಿಗಳು ಬಂದಿದ್ದು ಅವುಗಳನ್ನು ಪರಿಶೀಲಿಸಲಾಗುವುದು. ಪಿಎಂ-ಕುಸುಮ್‌ ಬಿ ಯೋಜನೆಯಡಿ ಕೇಂದ್ರ ಸರ್ಕಾರಿಂದ 7.5 ಎಚ್‌.ಪಿ ಸಾಮರ್ಥಯದ ಸೌರ ಪಂಪ್‌ಸೆಟ್‌ಗಳಿಗೆ ಶೇ.30ರಷ್ಟು ಕೇಂದ್ರ ಸಹಾಯಧನ ಒದಗಿಸುತ್ತದೆ. ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದ ರೈತ ಫ‌ಲಾನುಭವಿಗಳಿಗೆ ಪ್ರತಿ ಪಂಪ್‌ಸೆಟ್‌ಗೆ ಶೇ. 30ರಷ್ಟು ಹಾಗೂ ಎಸ್ಸಿ, ಎಸ್ಟಿ ರೈತರಿಗೆ ಶೇ.50ರಷ್ಟು ರಾಜ್ಯ ಸಹಾಯಧನ ಒದಗಿಸಲಾಗುವುದು. ಇನ್ನುಳಿದ ಹಣವನ್ನು ರೈತ ಫ‌ಲಾನುಭವಿಗಳಿಂದ ಭರಿಸಿ ಯೋಜನೆಯನ್ನು ಕ್ರೆಡಲ್‌ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಪಿ.ಎಂ ಕುಸುಮ್‌-ಸಿ ಯೋಜನೆಯಡಿ ಫೀಡರ್‌ ಮಟ್ಟದ ಸೌರೀಕರಣ ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಡಿ 3.37 ಲಕ್ಷ ಫ‌ಲಾನುಭವಿಗಳು ಇದ್ದಾರೆ ಎಂದು ಸಚಿವ ಸುನೀಲ್‌ ಕುಮಾರ್‌ ಮಾಹಿತಿ ನೀಡಿದರು.

ಉಚಿತಗಳ ಭರಾಟೆಯಲ್ಲಿ ಎಸ್ಕಾಂಗಳನ್ನು ದಿವಾಳಿ ಮಾಡಲ್ಲ
ವಿಧಾನಪರಿಷತ್ತು: ಈಗಾಗಲೇ ಎಸ್ಕಾಂಗಳ ಮೇಲೆ 72 ಸಾವಿರ ಕೋಟಿ ರೂ. ಸಾಲದ ಹೊರೆಯಿದೆ. ಹೀಗಿದ್ದಾಗ 200 ಯೂನಿಟ್‌ ಉಚಿತ ವಿದ್ಯುತ್‌ ಭರವಸೆ ನೀಡಲಾಗಿದೆ. ಹೀಗಾದರೆ ಎಸ್ಕಾಂಗಳ ಸ್ಥಿತಿ ಎಲ್ಲಿಗೆ ತಲುಪಬೇಕು ಎಂದು ಬಿಜೆಪಿ ಸದಸ್ಯ ಡಿ.ಎಸ್‌. ಅರುಣ್‌ ಪ್ರಶ್ನೋತ್ತರ ವೇಳೆ ಪರೋಕ್ಷವಾಗಿ ಕಾಂಗ್ರೆಸ್‌ ಘೋಷಣೆಯನ್ನು ಪ್ರಸ್ತಾಪಿಸಿದರು.

Advertisement

ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮೂರು ಜನಪರ ಯೋಜನೆಗಳು ಜಾರಿಯಲ್ಲಿವೆ. ಒಂದು ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆ ಇದರಡಿ 40 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುತ್ತದೆ. ಇದರಡಿ 26.80 ಲಕ್ಷ ಫ‌ಲಾನುಭವಿಳಿದ್ದಾರೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುವ ಯೋಜನೆಯಡಿ 33.46 ಲಕ್ಷ ಫ‌ಲಾನುಭವಿಗಳಿದ್ದಾರೆ. ನಮ್ಮ ಸರ್ಕಾರದಲ್ಲಿ ಎಸ್ಸಿ-ಎಸ್ಟಿ ಬಿಪಿಎಲ್‌ ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್‌ ಘೋಷಿಸಲಾಗಿದ್ದು, 24 ಲಕ್ಷ ಫ‌ಲಾನುಭವಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವರ್ಷಕ್ಕೆ 12 ಸಾವಿರ ಕೋಟಿ ರೂ. ಸಬ್ಸಿಡಿ ಇಂಧನ ಇಲಾಖೆ ನೀಡುತ್ತಿದೆ. ಈ ಉಚಿತಗಳ ಭರಾಟೆಯಲ್ಲಿ ಸಾಲದ ಹೊರೆ ಹೆಚ್ಚಾಗುತ್ತಿದೆ. ಎಸ್ಕಾಂಗಳ ಮೇಲೆ 72 ಸಾವಿರ ಕೋಟಿ ರೂ. ಭಾರ ಇರುವುದು ನಿಜ. ಹೆಸ್ಕಾಂ ಮತ್ತು ಕೆಪಿಟಿಸಿಎಲ್‌ ದಿವಾಳಿ ಹಂತಕ್ಕೆ ತಲುಪಿದ್ದವು. ನಮ್ಮ ಸರ್ಕಾರ 12 ಸಾವಿರ ಕೋಟಿ ರೂ. ಕೊಟ್ಟು ಪುನಶ್ಚೇತನ ಮಾಡಿದೆ. ಉಚಿತಗಳ ಭರಾಟೆಯಲ್ಲಿ ಎಸ್ಕಾಂಗಳನ್ನು ದಿವಾಳಿ ಮಾಡಲು ಸರ್ಕಾರ ಸಿದ್ಧವಿಲ್ಲ ಎಂದರು.

ವಿದ್ಯುತ್‌ ದರ ಏರಿಕೆ ಪ್ರಸ್ತಾಪ ಇಲ್ಲ:
ವಿಧಾನಪರಿಷತ್ತು: ಕಾಂಗ್ರೆಸ್‌ನ ನಾಗರಾಜ್‌ ಯಾದವ್‌ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ವಿ. ಸುನೀಲ್‌ ಕುಮಾರ್‌, ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ನಿಯಮದಂತೆ ವಿದ್ಯುತ್‌ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮುಂದೆ ಪ್ರಸ್ತಾನೆಗಳನ್ನು ಸಲ್ಲಿಸುತ್ತಾರೆ. ಅದಕ್ಕೆ ಸಾರ್ವಜನಿಕ ಅಹವಾಲುಗಳನ್ನು ಆಲಿಸಿ ಕೆಇಎಆರ್‌ಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ವಿದ್ಯುತ್‌ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next