ಕಲಬುರಗಿ: ರಾಜ್ಯದಲ್ಲಿ ಸದ್ಯ ದೊಡ್ಡ ಪ್ರಮಾಣದ ಕೋವಿಡ್ ಲಸಿಕೆ ಲಭ್ಯವಿಲ್ಲ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಯಲ್ಲಿ ಸಾಂಕೇತಿಕವಾಗಿ ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಮೂರು ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. ರಾಜ್ಯಾದ್ಯಂತ ಆರು ಸಾವಿರ ಲಸಿಕಾ ಕೇಂದ್ರಗಳಿವೆ. ಎಲ್ಲ ಕೇಂದ್ರಗಳಿಗೆ ಕೊಡಬೇಕಾದರೂ ಆರು ಲಕ್ಷ ಡೋಸ್ ಅಗತ್ಯವಾಗಿರುತ್ತದೆ ಎಂದರು.
ಹೊಸದಾಗಿ 2 ಕೋಟಿ ಡೋಸ್ ಲಸಿಕೆಗಳಿಗೆ ಆರ್ಡರ್ ಮಾಡಲಾಗಿದೆ. ಸಾರ್ವತ್ರಿಕ ಲಸಿಕೆ ಯಾವಾಗಿನಿಂದ ಆರಂಭವಾಗಲಿದೆ ಎಂಬುದು ಕಂಪನಿಗಳ ಉತ್ಪಾದನೆ ನೋಡಿಕೊಂಡು ತಿಳಿಸಲಾಗುತ್ತದೆ ಎಂದರು.
ಇದನ್ನೂ ಓದಿ:ಸಿ.ಟಿ ಸ್ಕ್ಯಾನ್ ಗೆ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ: ಸಚಿವ ಸುಧಾಕರ್
ಕರ್ಫ್ಯೂ ಜಾರಿಗೆ ಬಂದು ನಾಲ್ಕು ದಿನಗಳಷ್ಟೇ ಆಗಿದ್ದು, ಇದರ ಪರಿಣಾಮ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಮಹಾರಾಷ್ಟ್ರದಲ್ಲಿ 44 ದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಈಗಷ್ಟೇ ಮುಂಬೈನಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಹಾಗಾಗಿ ಇನ್ನೂ ಬಿಗಿ ಕ್ರಮಗಳು ಅನಿವಾರ್ಯವಾಗಿದೆ. ಆಗಲೂ ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ನಿಯಮ ಅನಿವಾರ್ಯ ಎಂದರು.
ಯಾದಗಿರಿ ಆಸ್ಪತ್ರೆಯಲ್ಲಿ ಕರೆಂಟ್ ಹೋದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರೆಂಟ್ ಹೋದರೆ ಆರೋಗ್ಯ ಸಚಿವ ಏನು ಮಾಡಬೇಕು?. ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರೆಂಟ್ ಹೋದರೆ ಆರೋಗ್ಯ ಸಚಿವ ಏನು ಮಾಡಬೇಕು ಎಂದು ಮರು ಪ್ರಶ್ನಿಸಿದರು. ವರದಿ ತರಿಸಿಕೊಳ್ಳುತ್ತೇನೆ ಎಂದಷ್ಟೇ ಹೇಳಿದರು.
ಈ ಸಮಯದಲ್ಲಿ ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ಡಾ.ಅವಿನಾಶ್ ಜಾಧವ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.