ಹುಬ್ಬಳ್ಳಿ: ವಸತಿ ಸಚಿವ ವಿ. ಸೋಮಣ್ಣ ಅವರು ಪಕ್ಷದಲ್ಲಿದ್ದಾರೆ ಮತ್ತು ಮುಂದೆಯೂ ಪಕ್ಷದಲ್ಲೇ ಉಳಿಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ವಸತಿ ಸಚಿವ ವಿ ಸೋಮಣ್ಣ ಅವರು ಬಿಜೆಪಿಯನ್ನು ತೊರೆಯಬಹುದು ಎಂಬ ಚರ್ಚೆಯ ಕುರಿತು ಪ್ರತಿಕ್ರಿಯಿಸಿದ ಸಿಎಂ, “ನಾವು ಹಳೆಯ ಸ್ನೇಹಿತರು, ನಾವು ನಿರಂತರವಾಗಿ ಚರ್ಚೆಗಳನ್ನು ನಡೆಸುತ್ತೇವೆ … ಅವರು ನಮ್ಮೊಂದಿಗಿದ್ದಾರೆ ಮತ್ತು ನಮ್ಮೊಂದಿಗೆ ಇರುತ್ತಾರೆ, ಯಾವುದೇ ಊಹಾಪೋಹಗಳ ಅಗತ್ಯವಿಲ್ಲ” ಎಂದರು.
ಸೋಮಣ್ಣ ಬಿಜೆಪಿಯಲ್ಲಿ ಅತೃಪ್ತರಾಗಿದ್ದು, ಕಾಂಗ್ರೆಸ್ ಸೇರುವ ಯೋಚನೆಯಲ್ಲಿದ್ದಾರೆ ಎಂಬ ಊಹಾಪೋಹಗಳು ಕೆಲ ದಿನಗಳಿಂದ ಹರಿದಾಡುತ್ತಿವೆ.ಹುಬ್ಬಳ್ಳಿಯಲ್ಲಿ ಮಾತುಕತೆ ನೆಡೆದಿದೆ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಮ್ಮದು ಕೇವಲ ಔಪಚಾರಿಕ ಭೇಟಿಯಾಗಿತ್ತು ಎಂದರು.
ನಾವು ಪ್ರಧಾನಿ ಮೋದಿ ಅವರನ್ನು ಎಂದೂ ದೇವರು ಅಂದಿಲ್ಲ, ಅವರೂ ಅಂದುಕೊಂಡಿಲ್ಲ. ಗಡಿ ಭದ್ರತೆ ಮತ್ತು ಆಂತರಿಕ ಸುರಕ್ಷತೆ ಹೆಚ್ಚಿಸಿದ ಆಪತ್ಬಾಂಧವ, ಅವರೊಬ್ಬ ಮಹಾನ್ ನಾಯಕ ಎಂದು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದರು.
ಕೂಡಲೇ ಹೆಸ್ಕಾಮ್ ಮತ್ತು ಕೆಪಿಟಿಸಿಎಲ್ ನೌಕರರ ಸಮಸ್ಯೆ ಬಗೆಹರಿಸುತ್ತೇವೆ, ಈಗಾಗಲೇ ಎರಡು ಸುತ್ತಿನ ಮಾತುಕತೆಗಳು ನಡೆದಿವೆ ಎಂದರು.
ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಕ್ರೆಡಿಟ್ ವಾರ್ ಕುರಿತು ಹಾಸ್ಯಮಯವಾಗಿ ವಿಪಕ್ಷಗಳನ್ನು ಕುಟುಕಿದ ಸಿಎಂ, ಪಕ್ಕದ ಮನೆಯಲ್ಲಿ ಗಂಡು ಹಡೆದರೆ ಇವರು ಸಿಹಿ ಹಂಚುತ್ತಾರೆ ಅಂದರು.