Advertisement

ಅಕ್ರಮ ಮರಳು ದಂಧೆ ವಿರುದ್ಧ ಸಚಿವರ ಸಿಡಿಮಿಡಿ

12:49 PM Apr 29, 2022 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಅಕ್ರಮ ಸಾಗಣೆ ದಂಧೆ ತಡೆಯುವಲ್ಲಿ ವಿಫಲವಾದ ಜಿಲ್ಲಾಡಳಿತದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಆಚಾರ ಹಾಲಪ್ಪ ಸಿಡಿಮಿಡಿಗೊಂಡರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕ ಬಸನಗೌಡ ದದ್ದಲ್‌ ಮಾತನಾಡಿ, ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಬಂದು ಹಲವು ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಜಿಲ್ಲೆಯಲ್ಲಿ ಅನುಷ್ಠಾನನಗೊಳಿಸಿಲ್ಲ. ಈ ಬಗ್ಗೆ ಸಚಿವರು ಗಮನ ಹರಿಸುವಂತೆ ತಾಕೀತು ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಿ ವಿಶೇಷ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ವಿವಿಧೆಡೆ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿದ್ದು, ಮರಳು ಅಕ್ರಮ ದಂಧೆ ತಡೆಯಿರಿ. ಈ ಬಗ್ಗೆ ತೀವ್ರ ನಿಗಾವಹಿಸಿ ಟಾಸ್ಕ್ಫೋರ್ಸ್‌ ಸಮಿತಿ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ಮರಳು ಸಾಗಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ರಾಜಧನ ಸರಿಯಾಗಿ ಪಾವತಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್‌ಪಿ ನಿಖೀಲ್‌ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅನುಮತಿ ಇಲ್ಲದೆ ಮರಳು ಸಾಗಿಸಿದ ನೋಂದಣಿ ಸಂಖ್ಯೆ ಇಲ್ಲದ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.

Advertisement

ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಅಂಥ ಕಡೆ ಕೂಡಲೇ ಸೌಲಭ್ಯ ಕಲ್ಪಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ನೀರು ಪೂರೈಸುತ್ತಿಲ್ಲ ಎನ್ನುವ ದೂರು ಬರಬಾರದು. ಅಪೌಷ್ಟಿಕ ಮಕ್ಕಳ ಬಗ್ಗೆ ವಿಶೇಷ ಗಮನ ನೀಡಬೇಕು. ಅದರಂತೆ ಗರ್ಭಿಣಿ, ಬಾಣಂತಿಯರ ಅಪೌಷ್ಟಿಕತೆ ನಿವಾರಣೆಗೂ ಆದ್ಯತೆ ನೀಡಬೇಕು ಎಂದರು.

ಶಾಸಕ ಡಾ| ಎಸ್‌.ಶಿವರಾಜ ಪಾಟೀಲ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಡಾ| ರೇಜು, ಮಹಿಳಾ ಆಯೋಗದ ಅಧ್ಯಕ್ಷೆ ಡಾ| ಜಯಲಕ್ಷ್ಮೀ, ಎಡಿಸಿ ಡಾ| ಕೆ.ಆರ್‌.ದುರುಗೇಶ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next