Advertisement
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಅಗತ್ಯವಿದೆ. ಹಿಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೂ ಮೈತ್ರಿಕೂಟವನ್ನು ಬಿಟ್ಟಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಿಂದಲೂ ಇದು ನಡೆದುಕೊಂಡು ಬರುತ್ತಿದೆ. ಮುಂದಿನ ಚುನಾವಣೆಯಲ್ಲಿ ಪ್ರಾಂತೀಯವಾಗಿ ಎಲ್ಲೆಲ್ಲಿ ಸಾಧ್ಯವೂ ಅಲ್ಲೆಲ್ಲ ಮೈತ್ರಿ ಸಂಬಂಧ ಪ್ರಾದೇಶಿಕ ಪಕ್ಷದ ಜತೆ ಮಾತುಕತೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಜೆಡಿಎಸ್ ಜತೆ ಮಾತುಕುತೆ ನಡೆಯುತ್ತಿದೆ. ಬಿಜೆಪಿ ವಿಚಾರ, ಸಂಕಲ್ಪ ಹಾಗೂ ದೇಶದ ಪರಿಕಲ್ಪನೆಯಲ್ಲಿ ಜೆಡಿಎಸ್‌ಗೆ ಬಿಜೆಪಿ ಜತೆ ಮೈತ್ರಿಗೆ ಸ್ವಾಗತವಿದೆ. ಕಹಿ ನೆನಪು ಮರೆತು ನಾವು ಒಂದಾಗಿ ಹೋಗಲು ಸಿದ್ಧರಿದ್ದೇವೆ ಎಂದು ಹೇಳಿದರು.
ಕರ್ನಾಟಕ ಸಹಿತ ದೇಶದ ವಿವಿಧ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಿದೆ ಹಾಗೂ ಬಿತ್ತನೆಯೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹಾಗೆಯೇ ಕೆಲವು ರಾಜ್ಯದಲ್ಲಿ ಭೀಕರ ಪ್ರವಾಹವೂ ಇದೆ. ಬರ ಮತ್ತು ನೆರೆ ಎರಡೂ ಬಂದಿದೆ. ಕರ್ನಾಟಕದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮದಂತೆ ಬರ ಘೋಷಣೆ ಮಾಡಿದ್ದಲ್ಲಿ ಖಂಡಿತವಾಗಿಯೂ ಕೇಂದ್ರದಿಂದ ಎನ್‌ಡಿಆರ್‌ಎಫ್ ಅಡಿಯಲ್ಲಿ ಅನುದಾನ ಬರಲಿದೆ. ಯಾವುದೇ ರಾಜ್ಯಕ್ಕೂ ಕೇಂದ್ರ ಸರಕಾರದಿಂದ ಮಲತಾಯಿ ಧೋರಣೆ ಮಾಡುವುದಿಲ್ಲ. ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಲಾಗುತ್ತಿದೆ. ಕರ್ನಾಟಕಕ್ಕೂ ಸೂಕ್ತ ನೆರವು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು. ಹೆಚ್ಚುವರಿ ಜಮೀನು ಮಂಜೂರು
ಇಎಸ್‌ಐ ಆಸ್ಪತ್ರೆ ಮಂಜೂರಾಗಿ ಮೂರು ವರ್ಷ ಕಳೆದರೂ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಭೂಪೇಂದ್ರ ಯಾವದ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಆಸ್ಪತ್ರೆ ನಿರ್ಮಾಣ ಸಂಬಂಧ ಇಎಸ್‌ಐನಿಂದ ಕೇಳಿರುವ ಹೆಚ್ಚುವರಿ ಜಮೀನು ಮಂಜೂರು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೂ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
Related Articles
ಚೈತ್ರಾ ಕುಂದಾಪುರ ಅವರೊಂದಿಗೆ ವೈಯಕ್ತಿಕ ಸಂಪರ್ಕ, ಮಾತುಕತೆ ಮಾಡಿಲ್ಲ. ಕಾರ್ಯಕ್ರಮದಲ್ಲಿ ಸಿಕ್ಕಿರಬಹುದು, ಅವರಾಗಿಯೇ ಫೋಟೋ ತೆಗೆಸಿಕೊಂಡಿರಲೂ ಬಹುದು. ಚೈತ್ರಾರಿಂದ ಯಾವುದೇ ಫೋನ್ ಬಂದಿಲ್ಲ, ಅವರ ಮುಖವೂ ನೆನಪಿಲ್ಲ. ರಾಜಕೀಯ, ಸಾಮಾಜಿಕ ಜೀವನದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ರಾಜ್ಯ ಸರಕಾರ ಇಂತಹ ಪ್ರಕರಣವನ್ನು ನಿಷ್ಪಕ್ಷಪಾತದಿಂದ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
Advertisement
ರಾಜಕಾರಣದಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಆಯಾ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಮೋದಿ, ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಅವರು ತೀರ್ಮಾನಿಸಲಿದ್ದಾರೆ. ಪಕ್ಷದ ನಾಯಕರು ಅಥವಾ ಪಕ್ಷದ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಅಂತವರ ವಿರುದ್ಧ ತನಿಖೆಯಾಗಬೇಕು. ಬಿಜೆಪಿಯಲ್ಲಿ ದುಡ್ಡು ಪಡೆದು ಟಿಕೆಟ್ ನೀಡುವ ಪದ್ಧತಿ ಹಿಂದೆಯೂ ಇಲ್ಲ, ಈಗಲೂ ಇಲ್ಲ. ಮುಂದೆಯೂ ಬರುವುದಿಲ್ಲ ಎಂದು ಹೇಳಿದರು.