ಜೈಪುರ: ಮಣಿಪುರ ಹಿಂಸಾಚಾರದ ವಿಷಯವನ್ನು ಕಾಂಗ್ರೆಸ್‌ನ ಸಹೋದ್ಯೋಗಿಗಳು ಎತ್ತುತ್ತಿರುವಂತೆಯೇ, ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವಲ್ಲಿ ತಮ್ಮದೇ ಸರಕಾರ ವಿಫಲವಾಗಿರುವ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಎತ್ತಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ ಕೆಲವೇ ಗಂಟೆಗಳ ನಂತರ ರಾಜಸ್ಥಾನದ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ.
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಭೀಕರ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಒಂದು ದಿನದ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ.
ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರನ್ನು ಇಂದು ಸಂಜೆ ಸಚಿವ ಸಂಪುಟದಿಂದ ವಜಾಗೊಳಿಸಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಿಫಾರಸು ಮಾಡಿದ್ದಾರೆ ಮತ್ತು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ತತ್ ಕ್ಷಣದಿಂದ ಜಾರಿಗೆ ಬರುವಂತೆ ಶಿಫಾರಸನ್ನು ಅಂಗೀಕರಿಸಿದ್ದಾರೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ.
ಗುಧಾ ಅವರು ಸೈನಿಕ ಕಲ್ಯಾಣ್ (ಸ್ವತಂತ್ರ ಉಸ್ತುವಾರಿ), ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾಗಿದ್ದರು.
ರಾಜ್ಯ ವಿಧಾನಸಭೆಯಲ್ಲಿ ರಾಜಸ್ಥಾನದ ಕನಿಷ್ಠ ಆದಾಯ ಖಾತರಿ ಮಸೂದೆ 2023 ರ ಚರ್ಚೆಯ ಸಂದರ್ಭದಲ್ಲಿ, ಕಾಂಗ್ರೆಸ್ ಶಾಸಕರು ಮಣಿಪುರದಲ್ಲಿ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿದರು. ಆದಾಗ್ಯೂ, ಗುಧಾ ಅವರು ತಮ್ಮದೇ ಸರಕಾರದ ಆತ್ಮಾವಲೋಕನಕ್ಕೆ ಕರೆ ನೀಡಿದ್ದರು.