Advertisement

“ಕರಾವಳಿಯ ಕಂದಾಯ ಸಮಸ್ಯೆಗೆ ಶೀಘ್ರ ಪರಿಹಾರ’

09:34 AM Nov 26, 2018 | |

ಮಂಗಳೂರು; ಕರಾವಳಿಯಲ್ಲಿ ಭೂ ಪರಿವರ್ತನೆ, ಸಿಂಗಲ್‌ ಸೈಟ್‌, 94ಸಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಂಡುಬಂದಿವೆ. ಇವನ್ನು ಪರಿಹರಿಸಲು ಶೀಘ್ರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ರವಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, 94ಸಿ ಅಡಿಯಲ್ಲಿ ನಗರ ಪ್ರದೇಶದಲ್ಲಿ ಹಕ್ಕುಪತ್ರದೊಂದಿಗೆ ಖಾತಾವನ್ನೂ ಕೊಟ್ಟಿದ್ದೇವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಖಾತಾ ನೀಡಲು ತೊಡಕು ಎದುರಾಗಿದ್ದು, ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

ಗ್ರಾಮ ವಿಂಗಡನೆಗೆ ಚಾಲನೆ
ಹೊಸ ತಾಲೂಕುಗಳಾದ ಮೂಡುಬಿದಿರೆ ಮತ್ತು ಕಡಬದಲ್ಲಿ ತಹಶೀಲ್ದಾರ್‌ ಕಚೇರಿಗಳು ಈಗಾಗಲೇ ಕಾರ್ಯಾರಂಭವಾಗಿವೆ. ಸಾಂಕೇತಿಕ ಉದ್ಘಾಟನೆಯಷ್ಟೆ ಬಾಕಿಯಿದೆ. ಅಲ್ಲಿ ಅಗತ್ಯ ಕಟ್ಟಡಗಳನ್ನು ಕಟ್ಟಲು ಆಡಳಿತಾತ್ಮಕ ಒಪ್ಪಿಗೆಯೂ ಆಗಿದ್ದು, ಟೆಂಡರ್‌ ಪ್ರಕ್ರಿಯೆಗಳು ನಡೆಯುತ್ತಿವೆ. ಹೊಸ ತಾಲೂಕು ರಚನೆಗೆ ಅಗತ್ಯವಾಗಿರುವ ಎಲ್ಲ ದಾಖಲೆಗಳನ್ನೂ ವರ್ಗಾವಣೆ ಮಾಡಲಾಗಿದೆ. ಆದರೆ ಗ್ರಾಮಗಳ ವಿಂಗಡಣೆ ಸಂಪೂರ್ಣವಾಗಿ ಆಗಿಲ್ಲ. ಆ ಕೆಲಸಕ್ಕೆ ಈಗ ಚಾಲನೆ ನೀಡಿದ್ದೇವೆ ಎಂದು ದೇಶಪಾಂಡೆ ಹೇಳಿದರು.

ಚಿತ್ರರಂಗ-ಸರಕಾರದ ನಡುವೆ ಕೊಂಡಿ
ನಗರಾಭಿವೃದ್ಧಿ, ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ಚಿತ್ರರಂಗದಲ್ಲಿ ರಾಷ್ಟ್ರಮಟ್ಟದ ಪ್ರಸಿದ್ಧಿ ಹೊಂದಿದ್ದ, ಜನರ ಅತೀವ ಪ್ರೀತಿಗೆ ಪಾತ್ರರಾಗಿದ್ದ ಅಂಬರೀಷ್‌ ನಿಧನ ನಾಡಿಗೆ ಬಹುದೊಡ್ಡ ನಷ್ಟ. ಚಿತ್ರರಂಗ ಹಾಗೂ ಸರಕಾರದ ನಡುವೆ ಕೊಂಡಿಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕೊಂಡಿಯೀಗ ಕಳಚಿಬಿದ್ದಿದೆ’ ಎಂದರು. ಸಚಿವ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ವಿ.ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಐವನ್‌ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್‌. ಲೋಬೊ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಉಪಸ್ಥಿತರಿದ್ದರು.

ಚಿತ್ರರಂಗ ಆಧಾರಸ್ತಂಭ ಕಳೆದುಕೊಂಡಿದೆ
ನೂರಾರು ಚಿತ್ರಗಳಲ್ಲಿ ಅಭಿನಯಿಸಿ ದೇಶಾದ್ಯಂತ ಜನರ ಅಭಿಮಾನ ಪಡೆದಿದ್ದ ಅಂಬರೀಷ್‌ ಅವರು ಡಾ| ರಾಜ್‌ಕುಮಾರ್‌ ಅನಂತರ ಚಿತ್ರರಂಗಕ್ಕೆ ಆಧಾರ ಸ್ತಂಭವಾಗಿದ್ದರು. ರಾಜಕೀಯದಲ್ಲೂ ಮಂಡ್ಯದಿಂದ 
ಮೂರು ಬಾರಿ ಆರಿಸಿಬಂದು, ವಸತಿ ಸಚಿವರಾಗಿ ಹೆಮ್ಮೆಪಡುವ ಕೆಲಸ ಮಾಡಿದ್ದರು. ಬಡವರು, ಜನರ ಬಗ್ಗೆ 
ಅಪಾರ ಕಾಳಜಿ ಹೊಂದಿದ್ದರು. ಅವರ ನಿಧನದಿಂದ ಚಿತ್ರರಂಗ, ರಾಜಕೀಯಕ್ಕೆ ದೊಡ್ಡ ನಷ್ಟವಾಗಿದೆ. ನಾಡಿನ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ದೇಶಪಾಂಡೆ ಸಂತಾಪ ವ್ಯಕ್ತಪಡಿಸಿದರು.

Advertisement

ಶೀಘ್ರ ಹೊಸ ತಾಲೂಕು ಉದ್ಘಾಟನೆ
ಕಡಬ ಮತ್ತು ಮೂಡುಬಿದಿರೆ ತಾಲೂಕುಗಳ ಅಧಿಕೃತ ಉದ್ಘಾಟನೆಯನ್ನು ರವಿವಾರ ನಿಗದಿ ಮಾಡಲಾಗಿತ್ತು. ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ರವಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದರು. ಆದರೆ ಶನಿವಾರ ತಡರಾತ್ರಿ ನಟ ಅಂಬರೀಷ್‌ ನಿಧನ ಹೊಂದಿದ್ದು, ಮೂರು ದಿನಗಳ ಕಾಲ ರಾಜ್ಯ ಸರಕಾರ ಶೋಕಾಚರಣೆ ಘೋಷಿಸಿದ್ದರಿಂದ ತಾಲೂಕು ಉದ್ಘಾಟನೆಯನ್ನು ಮುಂದೂಡಲಾಯಿತು. ಈ ಬಗ್ಗೆ ಕಂದಾಯ ಸಚಿವರಲ್ಲಿ ಸುದ್ದಿಗಾರರು ಪ್ರಶ್ನಿಸಿದಾಗ, ಹೊಸ ತಾಲೂಕು ಉದ್ಘಾಟನೆ ಎರಡು ಬಾರಿ ಅನಿವಾರ್ಯವಾಗಿ ಮುಂದೂಡಿಕೆಯಾಗಿದೆ. ಅತಿ ಶೀಘ್ರದಲ್ಲೇ ಮತ್ತೆ ಬಂದು ಉದ್ಘಾಟಿಸುತ್ತೇನೆ ಎಂದಿದ್ದಾರೆ. 

ಮೀನಿಗೆ ಫುಡ್‌ ಸೇಫ್ಟಿ ಸರ್ಟಿಫಿಕೇಟ್‌
ಗೋವಾ ಸರಕಾರ ರಾಜ್ಯದ ಮೀನಿಗೆ ನಿಷೇಧ ಹೇರಿಲ್ಲ. ಈ ಕುರಿತು ಗೋವಾ ಸರಕಾರದ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಮೀನುಗಳಲ್ಲಿ ಅಪಾಯಕಾರಿ ಫಾರ್ಮಾಲಿನ್‌ ಅಂಶ ಕಂಡುಬಂದಿದ್ದರಿಂದ ಆಹಾರ ಇಲಾಖೆಯ ಪ್ರಮಾಣಪತ್ರ ಒಪ್ಪಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಆದ್ದರಿಂದ ರಾಜ್ಯದ ಮೀನುಗಾರರು ಇಲ್ಲಿನ ಮೀನು ಕಳುಹಿಸುವ ಮೊದಲು ಅಗತ್ಯ ಪ್ರಮಾಣಪತ್ರ ಪಡೆಯಬೇಕು. ಇದು ಜನರ ಆರೋಗ್ಯ ಹಿತದೃಷ್ಟಿ ಯಿಂದಲೂ ಒಳ್ಳೆಯದು. ಹೀಗೆ ಮಾಡಿದರೆ ಯಾರಿಗೂ ಹಾನಿಯಿಲ್ಲ. ಫ‌ುಡ್‌ ಸೇಫ್ಟಿ ಸರ್ಟಿಫಿಕೇಟ್‌ ಪಡೆಯಲು ನಮ್ಮ ಮೀನುಗಾರರು ಕೂಡ ಒಪ್ಪಿಕೊಂಡಿದ್ದಾರೆ. ಈ ರೀತಿ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು ದೇಶಪಾಂಡೆ.

Advertisement

Udayavani is now on Telegram. Click here to join our channel and stay updated with the latest news.

Next