ಬೆಂಗಳೂರು: ನನ್ನಿಂದ ತಪ್ಪಾಗಿದೆ ಬಿಡಿ..ಜನ ಕೇಳಿದ್ರೆ ಕ್ಷಮೆ ಕೇಳುತ್ತೇನೆ, ಒಳ್ಳೆ ಕೆಲಸ ಮಾಡುವಾಗ ಇದೆಲ್ಲಾ ಸಾಮಾನ್ಯ..ಇದು ಸಚಿವ ಎಚ್.ಡಿ.ರೇವಣ್ಣ ಅವರು ಪ್ರವಾಹ ಸಂತ್ರಸ್ತ್ರರಿಗೆ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಎಸೆದು ವ್ಯಾಪಕ ಟೀಕೆಗೊಳಗಾದ ಬಳಿಕ ನೀಡಿದ ಸಮರ್ಥನೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನನ್ನಿಂದ ತಪ್ಪಾಗಿದೆ ಬಿಡಿ’ ಎಂದರು.
‘ನಾನು ದೇವರನ್ನು ನಂಬುವವನು.ನಾನು ಬೇಕು ಅಂತಾ ಎಸೆದಿಲ್ಲ. ಹಿಂದೆ ಕುಳಿತಿದ್ದವರೂ ಜೋರಾಗಿ ಕೂಗುತ್ತಿದ್ದವರು.ಅವರಿಗೂ ಸಿಗಲಿ ಅಂತಾ ಒಳ್ಳೆಯ ಮನಸ್ಸಿನಿಂನ ಎಸೆದಿದ್ದೇನೆ, ಅಂತಹ ಮನೋಭಾವನೆ ನನ್ನದಲ್ಲ’ ಎಂದರು.
‘ನಾನೇನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಲ್ಲ ಆದರೂ ಹಗಲು, ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದೇನೆ. 3 ಸಾವಿರ ಹಾಲಿನ ಪ್ಯಾಕೇಟ್ ವಿತರಿಸಿದ್ದೇನೆ. ಎಸೆದಿದ್ದೇನಾ’ ಎಂದು ಪ್ರಶ್ನಿಸಿದರು.
‘ಈ ಸಂದರ್ಭದಲ್ಲಿ ರಾಜಕೀಯ ಮಾಡುವುದು ಬೇಡ’ ಎಂದು ಸಚಿವ ರೇವಣ್ಣ ಮನವಿ ಮಾಡಿದರು.
ಹಾಸನದ ರಾಮನಾಥಪುರ ಸಂತ್ರಸ್ತ್ರರ ಕೇಂದ್ರದಲ್ಲಿ ರೇವಣ್ಣ ಅವರು ಬಿಸ್ಕೆಟ್ ಎಸೆದ ದೃಶ್ಯಾವಳಿ ವ್ಯಾಪಕವಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.