Advertisement

ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಕಲ ಕ್ರಮ: ಅಧಿಕಾರಿಗಳಿಗೆ ರಮೇಶ್ ಜಾರಕಿಹೊಳಿ ಸೂಚನೆ

01:28 PM Aug 07, 2020 | keerthan |

ಬೆಳಗಾವಿ: ಜಲಾಶಯಗಳಲ್ಲಿ ನೀರು ಪ್ರಮಾಣ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಮತ್ತಿತರ ಸಮನ್ವಯ ಸಾಧಿಸಲು ರಾಜ್ಯದ ಒಬ್ಬ ಅಧಿಕಾರಿಯನ್ನು ಮಹಾರಾಷ್ಟ್ರದ ಜಲಾಶಯಗಳಿಗೆ ಹಾಗೂ ಅಲ್ಲಿನ ಅಧಿಕಾರಿಗಳು ಇಲ್ಲಿನ ಜಲಾಶಯಗಳಿಗೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ ಜಾರಕಿಹೊಳಿ ಸೂಚನೆ ನೀಡಿದರು.

Advertisement

ಕೋವಿಡ್-19 ನಿಯಂತ್ರಣ ಹಾಗೂ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಿನ ಪ್ರಮಾಣ ಹೆಚ್ಚಳವಾದರೆ ಮಹಾರಾಷ್ಟ್ರ ತಕ್ಷಣವೇ ನೀರು ‌ಬಿಡುಗಡೆ ಮಾಡುತ್ತದೆ. ಆದ್ದರಿಂದ ನಿರಂತರ ನಿಗಾ ವಹಿಸಬೇಕು. ವಿಶೇಷವಾಗಿ ಕೊಯ್ನಾ ಮತ್ತು ರಾಜ್ಯದ ಆಲಮಟ್ಟಿ ಜಲಾಶಯಗಳ ಬಗ್ಗೆ ಉಭಯ ರಾಜ್ಯಗಳ ಅಧಿಕಾರಿಗಳು ಸತತ‌ ಮಾಹಿತಿ ವಿನಿಮಯ ಮತ್ತು ಸಮನ್ವಯತೆ ಸಾಧಿಸಬೇಕು. ಜಿಲ್ಲೆಯ ಜಲಾಶಯಗಳಿಂದ ಮೊದಲು‌ ಕೆರೆಗಳನ್ನು ತುಂಬಿಸಬೇಕು. ಇದಾದ ಬಳಿಕವೇ ಮುಂದೆ ನೀರು ಬಿಡುಗಡೆ ಮಾಡಬೇಕು ಎಂದು ಸಚಿವ ಜಾರಕಿಹೊಳಿ ಸೂಚನೆ ನೀಡಿದರು.

ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿಯಿಂದ ಮೂರ್ನಾಲ್ಕು ಬಾರಿ ಚರ್ಚೆ ನಡೆಸಿದ್ದಾರೆ.  ಆದ್ದರಿಂದ ಎಲ್ಲ ಅಧಿಕಾರಿಗಳು ತುರ್ತು ಪರಿಸ್ಥಿತಿ ನಿರ್ವಹಣೆಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಈ ವರ್ಷ ಕೋವಿಡ್ ಮತ್ತು ಪ್ರವಾಹ ಎರಡೂ‌ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಟ್ಟ‌ ತಕ್ಷಣವೇ ನಮ್ಮ ರಾಜ್ಯದ ಜಲಾಶಯಗಳಿಂದ ಮುಂದೆ ನೀರು ಬಿಡುಗಡೆ ಬಗ್ಗೆ ಸೂಚನೆ ನೀಡಬೇಕು ಎಂದರು.

Advertisement

ಬೀಜ, ಗೊಬ್ಬರ ಸೇರಿದಂತೆ ಯಾವುದೇ ಕೊರತೆ ಇದ್ದರೂ ತಮ್ಮ ಗಮನಕ್ಕೆ ತಂದರೆ ಸಂಬಂಧಿಸಿದ ಸಚಿವರ ಜತೆ ಚರ್ಚಿಸಲಾಗುವುದು ಎಂದರು.

ಸದ್ಯಕ್ಕೆ ಜಲಾಶಯಗಳ ಭರ್ತಿಗೆ ಇನ್ನೂ ಕಾಲಾವಕಾಶ ಇರುವುದರಿಂದ ಸದ್ಯಕ್ಕೆ ತೊಂದರೆಯಿಲ್ಲ ಎಂದು ಅಧಿಕಾರಿಗಳು ಹೇಳಿದರು. ಪ್ರವಾಹ ನಿರ್ವಹಣೆ ಎಲ್ಲ ತಾಲ್ಲೂಕು ಮತ್ತು ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನದಿ ತೀರದ ಗ್ರಾಮಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದರು.

ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣ ಆಧರಿಸಿ ಆಲಮಟ್ಟಿ ಆಣೆಕಟ್ಟುಯಿಂದ ನೀರು ಬಿಡುಗಡೆ ಬಗ್ಗೆ ಈಗಾಗಲೇ ನಿರ್ಧರಿಸಲಾಗಿದೆ. ಕಳೆದ ಬಾರಿ ಎಲ್ಲೆಲ್ಲಿ ಪರಿಹಾರ ಕೇಂದ್ರ ಮತ್ತು ಜಾನುವಾರು ಕೇಂದ್ರ ಸ್ಥಾಪಿಸಲಾಗಿತ್ತು. ಅದೇ ಸ್ಥಳದಲ್ಲಿ ಈ ಬಾರಿ ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ನದಿ ತೀರದ ಜನರಿಗೆ ಆಗಾಗ ಎಚ್ಚರಿಕೆ ನೀಡಲಾಗುತ್ತಿದೆ. ಚಿಕ್ಕೋಡಿ ಭಾಗದಲ್ಲಿ ಕಳೆದ ವರ್ಷ ಆರಂಭಿಸಲಾಗಿದ್ದ ಪರಿಹಾರ ಕೇಂದ್ರ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದರು.

ನಗರದಲ್ಲಿ ಕೂಡ ಪ್ರವಾಹ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತಿ ಎರಡು ದಿನಕ್ಕೊಮ್ಮೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆ ನಡೆಸಬೇಕು. ಸಂಘ-ಸಂಸ್ಥೆಗಳು ಐಸೋಲೇಷನ್ ಗಾಗಿ ಬೆಡ್ ವ್ಯವಸ್ಥೆ ಕಲ್ಪಿಸಲು ಮುಂದಾದರೆ ತಕ್ಷಣ ಅನುಮತಿ ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗೆ ಕಿಟ್: ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಸಿ ದೊಡ್ಡ ಪರದೆ ಅಳವಡಿಸುವ ಮೂಲಕ ಹೊರಗಡೆಯಿಂದ ಹಿರಿಯ ವೈದ್ಯರು ನಿಗಾ ವಹಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಿಗೆ ಆಂಟಿಜೆನ್ ಕಿಟ್ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಈ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸೋಂಕಿತರು ಕಡೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳು ಹಾಗೂ ಅಧಿಕ‌ ಜನಸಾಂದ್ರತೆ ಇರುವ ಕಡೆಗಳಲ್ಲಿ ತಪಾಸಣಾ ಪ್ರಮಾಣ ಹೆಚ್ಚಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮೊದಲ ಮೂರು ತಿಂಗಳಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ಅದರೆ ನಂತರ ಸಾವು ಸಂಖ್ಯೆ ಜಾಸ್ತಿ ವರದಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ತಿಳಿಸಿದರು. ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣಾ ಕಾರ್ಯ ಕೈಗೊಳ್ಳಬೇಕು. ಇದರಿಂದ ಜನರು ಕಡೆ ಗಳಿಗೆಯಲ್ಲಿ ಆಸ್ಪತ್ರೆಗೆ ಧಾವಿಸುವುದನ್ನು ತಡೆಗಟ್ಟಬಹುದು. ಈ ಬಗ್ಗೆ ಆದ್ಯತೆ‌ ನೀಡುವಂತೆ ಅವರು ಸಲಹೆ ನೀಡಿದರು.

ತಾಲ್ಲೂಕು ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಆಯಾ ತಾಲ್ಲೂಕುಗಳಲ್ಲಿ ಲಕ್ಷಣ ರಹಿತರಿಗೆ ಆರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂಜಿ ಹಿರೇಮಠ ತಿಳಿಸಿದರು. ಸರ್ಕಾರ ಹೆಚ್ಚುವರಿ ವೆಂಟಿಲೇಟರ್ ಕಳುಹಿಸಿದ್ದು, ಅಗತ್ಯತೆ ಆಧರಿಸಿ ಬಿಮ್ಸ್ ಹಾಗೂ ತಾಲ್ಲೂಕು ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಆಂಟಿಜೆನ್ ಕಿಟ್ ಸೇರಿದಂತೆ ಪ್ರತಿದಿನ ಒಂದು ಸಾವಿರ ಜನರ ಮಾದರಿ ತಪಾಸಣಾ ಸೌಲಭ್ಯವಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next