ಕೊಚ್ಚಿ: ಮಳೆ, ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳಕ್ಕೆ ಕೇಂದ್ರ ಸರಕಾರ 100 ಕೋಟಿ ರೂ. ಪರಿಹಾರ ಘೋಷಿಸಿದೆ. ರವಿವಾರ ಪ್ರವಾಹ ಪೀಡಿತ ಕೆಲವು ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಘೋಷಣೆ ಮಾಡಿದ್ದಾರೆ. ಜತೆಗೆ, ರಾಜ್ಯದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದೂ ಅವರು ಹೇಳಿದ್ದು, ರಾಜ್ಯ ಸರಕಾರದೊಂದಿಗೆ ನಾವಿದ್ದೇವೆ ಎಂಬ ಭರವಸೆಯನ್ನೂ ನೀಡಿದ್ದಾರೆ.
ಸಮೀಕ್ಷೆಯ ನಂತರ ಟ್ವೀಟ್ ಮಾಡಿರುವ ಸಿಂಗ್, “ಹಿಂದೆಂದೂ ಕಂಡಿರದಂಥ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇರಳದ ಜನರ ಕಷ್ಟಗಳು ಅರ್ಥವಾಗುತ್ತದೆ. ಹಾನಿಯ ಲೆಕ್ಕಾಚಾರ ಮಾಡಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ 100 ಕೋಟಿ ರೂ.ಗಳನ್ನು ತತ್‌ಕ್ಷಣದ ಪರಿಹಾರವಾಗಿ ಘೋಷಿಸುತ್ತಿದ್ದೇನೆ’ ಎಂದಿದ್ದಾರೆ.
ಸಿಎಂ ಪಿಣರಾಯಿ ವಿಜಯನ್ ಅವರು ರಾಜ್ಯಕ್ಕೆ 8,316 ಕೋಟಿ ರೂ. ನಷ್ಟವಾಗಿದ್ದು, 1,220 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಮತ್ತೆ ವರುಣನ ಆರ್ಭಟ: ಹವಾಮಾನ ಇಲಾಖೆ ಮುನ್ಸೂಚನೆಯಂತೆ, ರವಿವಾರಬೆಳಗ್ಗಿನಿಂದಲೇ ಕೇರಳದಾದ್ಯಂತ ಮಳೆ ಅಬ್ಬರಿಸಲು ಆರಂಭಿಸಿದೆ. ಎಡೆಬಿಡದೆ ಮಳೆಯಾಗುತ್ತಿರುವ ಕಾರಣ, ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ಉಚಿತ ಪಾಸ್‌ಪೋರ್ಟ್: ಪ್ರವಾಹದಿಂದಾಗಿ ಪಾಸ್‌ಪೋರ್ಟ್ ಹಾನಿಗೀಡಾಗಿದ್ದರೆ ಅಂಥವರಿಗೆ ಉಚಿತವಾಗಿ ಹೊಸ ಪಾಸ್‌ಪೋರ್ಟ್ ಒದಗಿಸಲಾ ಗುವುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಅಂಥವರು ಸಮೀಪದ ಪಾಸ್‌ಪೋರ್ಟ್ ಕೇಂದ್ರಗಳನ್ನು ಸಂಪರ್ಕಿಸುವಂ ತೆಯೂ ಸೂಚಿಸಿದ್ದಾರೆ.