ಬೆಳಗಾವಿ: ಬೆಳಗಾವಿ ಗಡಿ ವಿಷಯದಲ್ಲಿ ಕರ್ನಾಟಕ ಸರ್ಕಾರ ರಾಜಿ ಮಾಡಿಕೊಳ್ಳಲ್ಲ. ನಮ್ಮ ನಾಡಿನ ನೆಲ-ಜಲ ರಕ್ಷಣೆಗೆ ಯಾವುದೇ ಬೆಲೆ ತೆತ್ತಾದರೂ ರಕ್ಷಣೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಷಯದಲ್ಲಿ ಯಾರಾದರೂ ಪುಂಡಾಟಿಕೆ ನಡೆಸಿದರೆ ಸರ್ಕಾರ ಸುಮ್ಮನಿರಲ್ಲ. ಗಡಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಶಿವಸೇನೆಯ ಪುಂಡಾಟಿಕೆ ನಿಲ್ಲಿಸಲು ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಶಿವಸೇನೆ ಪುಂಡಾಟಿಕೆ ನಡೆಯುತ್ತಿದ್ದರೆ ಕಠಿಣ ಕ್ರಮ ಜರುಗಿಸಿ ಕಡಿವಾಣ ಹಾಕಬೇಕಿದೆ. ಇಂಥವರನ್ನು ಮಟ್ಟ ಹಾಕಲು ಜಿಲ್ಲಾ ಧಿಕಾರಿ, ಪೊಲೀಸ್ ಅಧಿ ಕಾರಿಗೆ ಸೂಚನೆ ನೀಡಲಾಗುವುದು. ಗಡಿ ಭಾಗದಲ್ಲಿ ಬಹಳಷ್ಟು ಜನ ಮರಾಠಿಗರು ಇದ್ದು, ಅವರೆಲ್ಲರೂ ಶಾಂತಿ ಬಯಸುತ್ತಾರೆ. ಕನ್ನಡಿಗರು- ಮರಾಠಿಗರ ಸೌಹಾರ್ದತೆಗೆ ಹುಳಿ ಹಿಂಡುವ ಕೆಲಸವನ್ನು ಯಾರೂ ಮಾಡಬಾರದು. ಶಿವಸೇನೆ ಕಾರ್ಯಕರ್ತರಿಗೆ ಸರ್ಕಾರ ಸರಿಯಾದ ಪಾಠ ಕಲಿಸಲಿದೆ. ಶಿವಸೇನೆಯವರಿಗೆ ಎಬಿಸಿಡಿಯಿಂದ ಹಿಡಿದು ಕನ್ನಡದ ಅಕ್ಷರ ಮಾಲೆಗಳನ್ನು ಕಲಿಸುತ್ತೇವೆ ಎಂದರು.
ಕರ್ನಾಟಕದಲ್ಲಿ ಶಿವಸೇನೆ ಬ್ಯಾನ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಿವಸೇನೆ ಅದೊಂದು ರಾಜಕೀಯ ಪಕ್ಷ. ಶಿವಸೇನೆ ರಾಷ್ಟ್ರೀಯ ಪಕ್ಷ ಆಗಿದ್ದರಿಂದ ಬ್ಯಾನ್ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೋ ಇಲ್ಲವೋ ಗೊತ್ತಿಲ್ಲ. ಅದರ ಬಗ್ಗೆ ನಾನು ವಿಚಾರಿಸುವೆ ಎಂದರು. ಬೆಳಗಾವಿ ಲೋಕಸಭೆ ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶೋಕ, ಚುನಾವಣೆ ಕಮಿಟಿಯಲ್ಲಿ ನಾನಿದ್ದೇನೆ. ನನಗೆ ತಿಳಿದಿರುವಂತೆ ಅಭ್ಯರ್ಥಿ ಯಾರಾಗಬೇಕೆಂದು ಅವರಿಗೆ ತಿಳಿಸಿರುವೆ. ಬೆಳಗಾವಿ ಲೋಕಸಭೆ ಅಭ್ಯರ್ಥಿ ಬಗ್ಗೆ ಅರುಣಸಿಂಗ್ ಜತೆಗೆ ಮಾತಾಡಿರುವೆ. ಬೆಳಗಾವಿ ಲೋಕಸಭೆಗೆ ನನ್ನ ದೃಷ್ಟಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಅಂತ ಹೇಳಿರುವೆ. ಉಳಿದಂತೆ ಬಿಜೆಪಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.
ಟಿಕೆಟ್ ರೇಸ್‌ನಲ್ಲಿ ಸುರೇಶ ಅಂಗಡಿ ಕುಟುಂಬ ಸೇರಿ ಬಹಳಷ್ಟು ಜನರಿದ್ದಾರೆ. ಬೆಳಗಾವಿ ಲೋಕಸಭೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಆಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದರು.